ADVERTISEMENT

ಮೌಢ್ಯ ತ್ಯಾಗ

ಲಿಂಗರಾಜು ಡಿ.ಎಸ್
Published 27 ಜನವರಿ 2020, 19:45 IST
Last Updated 27 ಜನವರಿ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಭಾನಾಮತಿ, ಮಾಟ-ಮಂತ್ರ, ಸಿಡಿ, ಮಡೆಸ್ನಾನದ ಆಚರಣೆ ಮೌಢ್ಯ ಅಂತ ನಿಷೇಧ ಮಾಡ್ಯವುರಂತೆ ನೋಡಿ ಸಾ!’ ಅಂದೆ ತುರೇಮಣೆಗೆ. ‘ಹ್ಞೂಂ ಕಲಾ ನೋಡಿದೆ. ಕಾಯ್ದೆ ಮಾಡುವಾಗ ಒಂದು ತಪ್ಪಾಗದೆ’ ಅಂದ್ರು.

‘ಅದೇನೇಳಿ ಸಾ, ಗ್ರಹಮಂತ್ರಿಗಳಿಗೆ ಹೇಳಮು’ ಅಂತಂದೆ.

‘ಇಲ್ಲ ಕಣೋ ಇದು ಭಾಳಾ ಸೂಕ್ಷ್ಮ ವಿಚಾರ. ರಾಜಕೀಯ ಮೌಢ್ಯ ಸೇರಿಸದು ಮರತುಕಬುಟ್ಟವ್ರೆ ಯಡೂರಪ್ಪಾರು!’ ಅಂದ್ರು ಮಗುಂ ಆಗಿ. ಈವಯ್ಯ ಮೌಢ್ಯ ಆಚರಣೆ ತಗಂಡೋಗಿ ರಾಜಕೀಯಕ್ಕೆ ಗಂಟಾಕ್ತಾ ಅದಲ್ಲಾ ಅಂತ ತಲೆ ಕೆಕರುಮಕರಾಯ್ತು.

ADVERTISEMENT

‘ಥೂ ಏನು ರೋಸ್ತಿರ ಸಾರ್. ಮೊದಲು ನಿಮ್ಮ ನಾಲಿಗೆ ಬಲಿ ಕೊಡಬೇಕು! ಮೌಢ್ಯಕ್ಕೂ ರಾಜಕೀಯಕ್ಕೂ ಏನು ಸಂಬಂಧ ಸಾರ್?’ ಅಂದೆ.

‘ಲೋ ಅಣ್ತಮ್ಮಾ, ರಾಜಕಾರಣಿಗಳ ತಾವೇ ಮೌಢ್ಯ ಜಾಸ್ತಿ ಕನೋ. ಮನ್ನೆ ತಾನೆ 17 ಜನ ಮಾಯ್ಕಾರರು ಬಾಂಬೇಗೋಗಿ ಕುಮಾರಣ್ಣನ ಸರ್ಕಾರಕ್ಕೆ ವಾಮಾಚಾರ ಮಾಡಲಿಲ್ವೇ? ಅವರಿಗೆಲ್ಲಾ ಮಂತ್ರಿ ಮಾಡ್ತೀವಿ ಅಂತ ಮಂಕುಬೂದಿ ಎರಚಿದ್ದು ಮೌಢ್ಯ ಅಲ್ಲುವೇ? ಈಗ ನಿಮ್ಮುನ್ನ ಬಲಿ ಕೊಡ್ತೀವಿ ಅನ್ನದು ತ್ಯಾಗವೇ? ಈಗ 17 ಜನವೂ ಮಂತ್ರಿ ಸ್ಥಾನಕ್ಕೋಸ್ಕರ ಮಡೆಸ್ನಾನ ಮಾಡ್ಕತಾಕುಂತವ್ರೆ! ಯಾವ ಮಂತ್ರಿ ಹೆಸರಲ್ಲಿ ವಡೆ-ಪಾಯಸವೋ ಗೊತ್ತಿಲ್ಲಾ ಕಪ್ಪಾ! ಅವನು ಸೈತಾನ ಅಂತ ಆಣೆ-ಪ್ರಮಾಣ ಮಾಡ್ತೀನಿ ಅನ್ನಲ್ಲವುಲಾ? ಸ್ವಾಮಿಗಳು ನಮಗೆ ಮಂತ್ರಿ ಕೊಡದಿದ್ರೆ ಸುಟ್ಟೋಯ್ತಿರಿ ಅಂದ್ರೆ ಅನ್ನಬೌದೇ! ನಮ್ಮ ನಾಯಕರು ಪವಿತ್ರಾತ್ಮ ಅಂತ ರಾಜಕಾರಣಿಗಳು ಹೊಗಳಿಕಣದಿಲ್ವೆ? ಇವೆಲ್ಲಾ ಮೌಢ್ಯದ ಬೇರೆಬೇರೆ ರೂಪಗಳು ಅಣ್ತಮ್ಮಾ! ಮೌಢ್ಯ ಹುಟ್ಟುಹಾಕೋ ರಾಜಕಾರಣಿಗಳನ್ನೇ ಮೊದಲು 7 ವರ್ಸ ಜೈಲಿಗಾಕಬೇಕು! ಏನಂತೀಯ?’ ಅಂದ್ರು. ನಾನು ಸುಸ್ತಾಗಿ ಬೆವರು ಒರೆಸಿಕ್ಯಂಡು ಕೂತುಗಂಡೆ. ತುರೇಮಣೆ ಮುಂದುವರಿಸಿದರು.

‘ಈಗ ನೋಡು ಕುಮಾರಣ್ಣ ಹುಗ್ರ ಅಂತ ತಾನೇ ತೀರ್ಮಾನ ಮಾಡಿಕ್ಯಂಡು ಕೊಲ್ಲಕೆ ಜನ ಬತ್ತಾವ್ರಂತೆ ಅಂದುಕಳದು ಭಾನಾಮತಿ ಮೆಟ್ಟಿಕಂಡಿರ ಸೂಚನೆ ಅಲ್ಲವಾ! ಹೇಳ್ಲಾ!’ ಅಂತ ಜುಲುಮೆ ಮಾಡತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.