ADVERTISEMENT

ಚುರುಮುರಿ | ಆಹಾ! ದಾಹ...

ಮಣ್ಣೆ ರಾಜು
Published 28 ಫೆಬ್ರುವರಿ 2024, 23:30 IST
Last Updated 28 ಫೆಬ್ರುವರಿ 2024, 23:30 IST
   

‘ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆಯಂತೆ. ರಾಜಧಾನಿ ಜನರ ದಾಹಾಕಾರ ತಣಿಸಲು ಜಲಮಂಡಳಿಯ ಜನ ಹೆಣಗಾಡ್ತಿದ್ದಾರಂತೆ ಕಣ್ರೀ’ ಅಂದಳು ಸುಮಿ.

‘ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವ ಕಾಟ, ಬೇಸಿಗೆಯಲ್ಲಿ ನೀರಿಲ್ಲದೆ ಪರದಾಟ. ಎರಡು ಕಾಲದಲ್ಲೂ ಬೆಂಗಳೂರಿಗೆ ನೀರಾ‘ವರಿ’ ತಪ್ಪಿದ್ದಲ್ಲ. ಮಳೆ ಸುರಿದರೂ ಕಸಿವಿಸಿ, ಬೆವರು ಸುರಿದರೂ ಕಸಿವಿಸಿ. ಆರತಿ ತಗೊಂಡ್ರೆ ಉಷ್ಣ, ತೀರ್ಥ ತಗೊಂಡ್ರೆ ಶೀತ ಎನ್ನುವಂತಾಗಿದೆ ಬೆಂಗಳೂರಿನ ಪರಿಸ್ಥಿತಿ’ ಎಂದು ನಕ್ಕ ಶಂಕ್ರಿ.

‘ಬೇಸಿಗೆಯಲ್ಲಿ ಬೆವರುಸಾಲೆ, ತ್ವಚೆಯಿಂದ ಸೌಂದರ್ಯ ವರ್ಣ ಹಾಳಾಗಬಹುದೆಂದು ದಿನಕ್ಕೆ ಮೂರು ಬಾರಿ ಸ್ನಾನ ಮಾಡಬೇಡಿ, ಕಾರು, ಬೈಕು, ರಸ್ತೆ ತೊಳೆದು ನೀರನ್ನು
ಪೋಲು ಮಾಡಬೇಡಿ ಅಂತ ನೀರು ಮಂಡಳಿಯವರು ಜಲಜಾಗೃತಿ ಮೂಡಿಸುತ್ತಿದ್ದಾರಂತೆ’.

ADVERTISEMENT

‘ಜಲಮೂಲ ಬರಿದಾಗುತ್ತಾ ಜೀವನದಿಗಳೇ ಕಣ್ಣೀರು ಹಾಕುತ್ತಿರುವಾಗ ನದಿ, ಸಮುದ್ರದ ಸಂಪರ್ಕವಿಲ್ಲದ ಬೆಂಗಳೂರಿಗೆ ಜಲಬಾಧೆ ಬಾಧಿಸದೆ ಇರುತ್ತಾ?’

‘ಊರಿಗೊಂದು ನದಿ ಎನ್ನುವ ಯೋಜನೆ ಜಾರಿಗೆ ತಂದು, ಬೆಂಗಳೂರು ಪಕ್ಕದಲ್ಲೊಂದು ಸರ್ವಋತು ನದಿ ನಿರ್ಮಾಣ ಮಾಡಿದರೆ ರಾಜಧಾನಿಯ ನೀರಿನ ಬವಣೆಗೆ ಶಾಶ್ವತ ಪರಿಹಾರ ಸಿಗಬಹುದು’.

‘ಚರಂಡಿ ನಿರ್ಮಿಸಿ ನೀರು ಹರಿಸಬಹುದು, ನದಿ ನಿರ್ಮಾಣ ಸಾಧ್ಯವಿಲ್ಲ’.

‘ಬೆಂಗಳೂರು ಕಟ್ಟುವಾಗ ಕೆಂಪೇಗೌಡರು ನೀರಿನ ವ್ಯವಸ್ಥೆಗೆ ಕೆರೆಗಳನ್ನೂ ಕಟ್ಟಿಸಿದ್ದರು. ನಾವು ಕೆರೆಗಳನ್ನು ಮುಚ್ಚಿ ಕಟ್ಟಡ ಕಟ್ಟಿದ್ದೇವೆ. ಇಂಗಲು, ತಂಗಲು ವ್ಯವಸ್ಥೆಯಿಲ್ಲದೆ ಮಳೆ ನೀರು ಊರುಬಿಟ್ಟು ಹೋಗುತ್ತದೆ. ಪಾರ್ಕು, ಸ್ಟೇಡಿಯಂ ರೀತಿ ಸರ್ಕಾರ ಬೆಂಗಳೂರಿನಲ್ಲಿ
ಕೆರೆಕಟ್ಟೆಗಳನ್ನೂ ಕಟ್ಟಿದರೆ ಮಳೆ ನೀರು ಸಂಗ್ರಹಿಸಿ ‘ನಮ್ಮ ನೀರು, ನಮ್ಮ ಹಕ್ಕು’ ಅಂತ ಜಲ ಸ್ವಾವಲಂಬಿ ಆಗಬಹುದು’.

‘ಕೆರೆ ಕಟ್ಟುವುದು ಕಷ್ಟವೇನಲ್ಲ, ಆದರೆ ಕೆರೆ ಕಬಳಿಸುವವರನ್ನು ಕಟ್ಟಿಹಾಕುವುದು
ಕಷ್ಟವಾಗಬಹುದು...’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.