ADVERTISEMENT

ಚುರುಮುರಿ: ಕುರ್ಚಿ ಕಥಾ ಕಾಲಕ್ಷೇಪ

ಮಣ್ಣೆ ರಾಜು
Published 24 ಫೆಬ್ರುವರಿ 2026, 23:30 IST
Last Updated 24 ಫೆಬ್ರುವರಿ 2026, 23:30 IST
   

‘ಕರುನಾಡು ರಾಜ್ಯದಲ್ಲಿ ಹಾಲಿ ಚೇರ್–ಮನ್ ಹಾಗೂ ಖಾಲಿ ಚೇರ್–ಮನ್ ನಡುವೆ ಕುರ್ಚಿ ಕಲಹ ನಡೆದಿತ್ತು. ರಾಜ್ಯಭಾರ ವ್ಯಾಜ್ಯಭಾರವಾಗಿತ್ತು...’ ಎಂದು ದಾಸರು ಕುರ್ಚಿ ಕಥಾಕಾಲ ಕ್ಷೇಪ ಆರಂಭಿಸಿದರು. ನೆರೆದಿದ್ದ ಜನ ಚಪ್ಪಾಳೆ ತಟ್ಟಿದರು.

‘ಇಂತಿರ್ಪ ರಾಜ್ಯದೊಳು ಕ್ಯಾಲೆಂಡರ್ ಹಾಳೆ ಬದಲಾಗಿ ಮಳೆಗಾಲ, ಚಳಿಗಾಲ ಮುಗಿದು ಬೇಸಿಗೆ ಶುರುವಾದರೂ ಚೇರ್ ವಾರ್ ಬದಲಾಗಲಿಲ್ಲ. ಬುದ್ಧಿವಂತನೂ ಚಾಣಾಕ್ಷನೂ ಚತುರನೂ ಆದ ಹಾಲಿ ಚೇರ್–ಮನ್, ವೀರನೂ ಶೂರನೂ ಪರಾಕ್ರಮಿಯೂ ಆದ ಖಾಲಿ ಚೇರ್–ಮನ್ ನಡುವಿನ ಬಹಿರಂಗದ ಮುದ್ದಾಟ, ಅಂತರಂಗದ ಗುದ್ದಾಟದ ಆಟಗಳನ್ನು ಪ್ರಜೆಗಳು ಕಂಡರೂ ಕಾಣದಂತೆ, ಕೇಳಿದರೂ ಕೇಳದಂತೆ ತೆಪ್ಪಗಿದ್ದರು...’

ಕಾಲಕ್ಷೇಪ ಮುಂದುವರಿಸಿದ ದಾಸರು, ‘ಹೀಗಿರುವಾಗ ಹಾಲಿಯ ಕುರ್ಚಿಭದ್ರ ಹಿತಾಸಕ್ತಿಯಿಂದ ನರಳಿ, ಕೆರಳಿದ ಖಾಲಿ ಚೇರ್–ಮನ್, ‘ನುಡಿದಂತೆ ನಡೆಯಿರಿ, ಕುರ್ಚಿ ಬಿಟ್ಟು ನಡಿಯಿರಿ’ ಎಂದು ಹಲವು ಬಾರಿ ಹೇಳಿದರೂ ಕೇಳಲಿಲ್ಲವಂತೆ. ದುಃಖತಪ್ತ ಖಾಲಿ ಚೇರ್–ಮನ್ ದೆಹಲಿ ಯಾತ್ರೆ ಮಾಡಿ ದೊರೆಗಳೆದುರು ಅಳಲು ತೋಡಿಕೊಂಡು, ತಮ್ಮ ತ್ಯಾಗ, ಸೇವೆ, ಕೊಡುಗೆ ನೆನಪಿಸಿ ಕುರ್ಚಿ ಭಾಗ್ಯದ ಬಿನ್ನಹ ಮಾಡಿಕೊಂಡರು. ಕರುಣಾಳು ದೊರೆಗಳು ಇಷ್ಟಾರ್ಥ ಸಿದ್ಧಿರಸ್ತು ಎಂದು ಆಶೀರ್ವಾದಿಸಿದರು.

ADVERTISEMENT

ಇದರಿಂದ ವಿಚಲಿತರಾದ ಹಾಲಿ ಚೇರ್–ಮನ್ ತಾವೂ ದೆಹಲಿ ಯಾತ್ರೆ ತೆರಳಿ ತಮ್ಮ ಸಾಧನೆ, ವೇದನೆ ವ್ಯಕ್ತಪಡಿಸಿ ದೀರ್ಘಾವಧಿ ಅಧಿಕಾರ ಕರುಣಿಸಿರೆಂದು ಕೋರಿಕೊಂಡರು. ದೊರೆಗಳು ತಥಾಸ್ತು ಎಂದರು.

ಚಿಂತಾಕ್ರಾಂತರಾದ ಖಾಲಿ ಚೇರ್–ಮನ್‌ಗೆ ದೇವರೇ ದಿಕ್ಕು ಎನ್ನುವಂತಾಗಿ ತೀರ್ಥಯಾತ್ರೆ ಕೈಗೊಂಡು ದೇವಸ್ಥಾನಗಳಲ್ಲಿ ಪೂಜೆ, ಪ್ರಾರ್ಥನೆ, ಭಜನೆ, ಧ್ಯಾನ ನಿರತರಾಗಿದ್ದಾರೆ. ಇಂದಲ್ಲಾ ನಾಳೆ ಪ್ರಯತ್ನ, ಪ್ರಾರ್ಥನೆ ಫಲಿಸುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ಎನ್ನುವಲ್ಲಿಗೆ ಈ ಕುರ್ಚಿ ಕಥಾಕಾಲಕ್ಷೇಪಕ್ಕೆ ಮಂಗಳ ಹಾಡುತ್ತೇನೆ, ಮಂಗಳ ಜಯ ಮಂಗಳ, ಮಂಗಳ ಶುಭ ಮಂಗಳ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.