ADVERTISEMENT

ಚುರುಮುರಿ – ಭಾಷಣ ಓಕೆ!

ಪ್ರಜಾವಾಣಿ ವಿಶೇಷ
Published 8 ಜೂನ್ 2023, 0:56 IST
Last Updated 8 ಜೂನ್ 2023, 0:56 IST
   

– ಗುರು ಪಿ.ಎಸ್.

‘ಹಾಳಾಗೋಯ್ತು, ಎಲ್ಲ ಹಾಳಾಗೋಯ್ತು’ ಪಾರ್ಕ್‌ನಲ್ಲಿ ಸೇರಿದ್ದ 10-15 ಜನರ ಮುಂದೆ ಭಯಂಕರ ಭಾಷಣ ಮಾಡ್ತಿದ್ದ ಲೋಕಲ್ ಲೀಡರ್ ಮುದ್ದಣ್ಣ.

‘ಹೌದಾ ಅಣ್ಣ, ಅಕ್ಕಿ, ಕರೆಂಟ್ ಫ್ರೀ ಕೊಟ್ರೆ, ಲೇಡೀಸ್‌ಗೆ ಬಸ್ ಟಿಕೆಟ್ ಫ್ರೀ ಮಾಡಿದ್ರೆ, ಮೇಲೆ ಎರಡೆರಡು ಸಾವಿರ ರೂಪಾಯಿನೂ ಕೊಟ್ರೆ ರಾಜ್ಯ ಹಾಳಾಗೋಗುತ್ತಾ’ ಕೇಳ್ದ ಅಸಿಸ್ಟೆಂಟ್ ವಿಜಿ.

ADVERTISEMENT

‘ಇಲ್ವೇನೋ ಮತ್ತೆ, ನಮ್ ಜನಗೋಳು ಆಗಲೇ ಸೋಂಬೇರಿಗಳಾಗವ್ರೆ, ಇನ್ನು ಇವೆಲ್ಲ ಬಿಟ್ಟಿಯಾಗಿ ಕೊಟ್ರೆ ಹಾಳಾಗಲ್ವ, ನಮ್ ರಾಜ್ಯದ ಎಕಾನಮಿ ಏನಾಗಬೇಕು’ ಉಗ್ರ ಭಾಷಣ ಮುಂದುವರಿಸಿದ ಮುದ್ದಣ್ಣ. ಜೊತೆಗಿದ್ದವರೂ ಜೋರಾಗಿ ಚಪ್ಪಾಳೆ ತಟ್ಟಿದ್ರು.

ಭಾಷಣ ಕೇಳಿ ಸೀದಾ ಮನೆಗೆ ಬಂದ ವಿಜಿ, ‘ನೋಡೇ, ಸರ್ಕಾರ ಕೊಡೋ ಈ ಬಿಟ್ಟಿ ಭಾಗ್ಯ ಎಲ್ಲ ನಮಗೆ ಬೇಡ. ನೀನು ಇನ್ನು ಈ ಬಿಟ್ಟಿ ಯೋಜನೆಗಳ ಬಗ್ಗೆ ಆಸೆ ಇಟ್ಕೊಬೇಡ’ ಎಂದು ಹೆಂಡ್ತಿಗೆ ಹೇಳ್ತಿದ್ದಂಗೆ ಒಳಗಡೆಯಿಂದ ಲಟ್ಟಣಿಗೆ ಶರವೇಗದಲ್ಲಿ ಬಂದು ಕಾಲಿಗೆ ಬಿತ್ತು!

‘ಅದೆಲ್ಲ ದೊಡ್ಡ ಶ್ರೀಮಂತರಿಗೆ ಸರಿ. ನಿಮಗೆ ಬರೋ ಸಂಬಳದಲ್ಲಿ ಡೈಲಿ ಹಾಲು, ಮೊಸರು ತಗೊಳೋಕೇ ಆಗಲ್ಲ ನಮಗೆ. ಮರ್ಯಾದೆಯಿಂದ ನಾಳೆನೇ ಹೋಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಎಲ್ಲದಕ್ಕೂ ಅರ್ಜಿ ಹಾಕಿ, ಹಾಗೇ ರೇಷನ್ ಕಾರ್ಡ್ ಮಾಡಿಸಿ’ ಎಂದು ಪತ್ನಿ ಆದೇಶಿಸಿದಳು.

ಮರುದಿನ ಸೈಬರ್ ಸೆಂಟರ್ ಮತ್ತು ಫುಡ್ ಡಿಪಾರ್ಟ್‌ಮೆಂಟ್ ಆಫೀಸ್‌ಗಳೆರಡರ ಮುಂದೆಯೂ ಉದ್ದನೆಯ ಸಾಲು ನೋಡಿ ವಿಜಿಗೆ ತಲೆ ಸುತ್ತಿದಂತಾಯ್ತು. ಆದರೂ ಕ್ಯೂನಲ್ಲಿ ನಿಂತ.

ತಲೆಗೆ ಟವೆಲ್ ಸುತ್ಕೊಂಡು ನಿಂತಿದ್ದ ಒಬ್ರನ್ನ ಕಂಡು, ಎಲ್ಲೋ ನೋಡಿದಂತಿದೆಯಲ್ಲ ಅಂದ್ಕೊಂಡು ಮುಂದೆ ಹೋದ, ‘ಮುದ್ದಣ್ಣ ನೀವು! ಏನಣ್ಣೋ ನೀವಿಲ್ಲಿ! ನಿನ್ನೆ ಏನೇನೋ ಭಾಷಣ ಮಾಡ್ತಿದ್ರಿ’.

ಮುಖ ಹುಳ್ಳಗೆ ಮಾಡ್ಕೊಂಡು ಮುದ್ದಣ್ಣ ಹೇಳ್ದ, ‘ಭಾಷಣ ಬೇರೆ, ಬದುಕೇ ಬೇರೆ’.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.