‘ಸಾ, ಹಳೇ ಸರ್ಕಾರಗಳು ಯಾವ್ಯಾವೋ ಕೇಸ್ ಹಾಕಿದ್ವಲ್ಲಾ ಅವುನ್ನೆಲ್ಲಾ ವಾಪಾಸ್ ತಕ್ಕಂದಾರಂತೆ. ಅದರಲ್ಲಿ ಎಂಪಿ, ಶಾಸಕರ ಮೇಲೆ ಹಲವಾರು ಕ್ರಿಮಿನಲ್ ಕೇಸು ಬಿದ್ದಿದ್ವಲ್ಲ, ಅವೂ ಸೇರ್ಕಂದವೇನೋ?’ ಸುದ್ದಿ ಸ್ಫೋಟಿಸಿದೆ.
‘ರಾಜಕೀಯದವ್ರ ಕಳ್ಳು–ಬಳ್ಳಿ, ಬಾಮೈಕ್ಳುಗಳು ಜನಶೇವೆ ಮಾಡದು ನೋಡನಾರದೆ ಆಗದೋರು ಹೊಟ್ಟುರಕಂದು ಹುನ್ನಾರ ಮಾಡಿರತರೆ ಕನ್ರೋ. ಬಂಡಾಟಕೆಲ್ಲಾ ದಕ್ಕಬಾರದು ಅಂತ ಇವರು ಕೇಸೆಲ್ಲಾ ವಾಪಾಸ್ ತಕ್ಕಂದಿರತರೆ’ ತುರೇಮಣೆ ವಿವರಿಸಿದರು.
‘ಈ ಕೇಸುಗಳಲ್ಲಿ ಈವತ್ತಿನವರೆಗೂ ಒಬ್ಬ ರಾಜಕೀಯದೋನೂ ಜೈಲಿಗೋಗಿದ್ದು ಕಾಣೆ. ಕೆಳಗಿನ ಕೋರ್ಟು ಶಿಕ್ಷೆ ಕೊಡಿ ಅಂದ್ರೆ ಮೇಲಿನ ಕೋರ್ಟಿಗೋಗಿ ಬೇಲು ತಕ್ಕತರೆ. ಕೇಸು ಮುಗಿಯೋವೊತ್ಗೆ ರಾಜಕಾರಣಿ ವಯಕ್ ಅಂದಿರತನೆ’ ಸಿಟ್ಟುಗಂದೆ.
‘ಮೊನ್ನೆ ಲೋಕಾಯುಕ್ತಗಳು ಸುಮಾರು ಮಿಕಗಳನ್ನ ಹಿಡಿದಾಕ್ಯವರೆ ಕನ್ರೋ. ಒಬ್ಬ 31 ಸೈಟು ಮಾಡಿದ್ರೆ ಇನ್ನೊಬ್ಬ ಆರು ಕಾಂಪ್ಲೆಕ್ಸ್ ದುಡಿದವ್ನಂತೆ’ ಯಂಟಪ್ಪಣ್ಣ ಬೆರಗಾಯ್ತು.
‘ಅವರುದ್ದೆಲ್ಲಾ ಅಕ್ರಮ ಸಂಪಾದ್ನೆ ಕನಣೈ. ಇವರ ವಿರುದ್ಧ ಕ್ರಮ ತಕ್ಕಳಿ ಅಂತ ಲೋಕಾಯುಕ್ತ ಕೊಟ್ಟ ರಿಪೋರ್ಟ್ ಸರ್ಕಾರದ ಮುಂದದಲ್ಲಾ ಇಟ್ಟಾಡುಸ್ತರೆ ಬುಡಿ’ ನಾನು ಸಮಾಧಾನಗೊಂಡೆ.
‘ಸಾವಿರಗಟ್ಲೆ ರಿಪೋರ್ಟ್ ಸರ್ಕಾರದ ಮುಂದೆ ಬಾಕಿ ಅವಲ್ರೋ. ಲೋಕಾಯುಕ್ತ ಕ್ರಮ ತಕ್ಕಳಿ ಅಂದೇಟಿಗೆ ಸರ್ಕಾರ, ‘ಆಯ್ತು ಕನಾ ಹಾಕ್ಯಂದ್ರು ರುಬ್ರಿ’ ಅಂತ ಪರ್ಮಿಸನ್ ಕೊಡಕ್ಕುಲ್ಲ’ ಯಂಟಪ್ಪಣ್ಣ ಶಕುನ ನುಡಿಯಿತು.
‘ದಿಟ ಕನೋ. ಸರ್ಕಾರಕ್ಕೆ ಕೈಖರ್ಚಿಗೆ ಕಾಸು ಬೇಕಲ್ರೋ, ಒನ್‌ಟೈಂ ಸೆಟಲ್‌ಮೆಂಟ್ ಮಾಡಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೀಬೈದು’.
‘ಅದೇನು ಸರಿಯಾಗೇಳಿ ಸಾ?’ ಗೋಗರೆದೆ.
‘ಅಕ್ರಮದಲ್ಲಿ ಸಿಗೇಬಿದ್ದಿರೋ ಶಾಸಕ, ಮಂತ್ರಿ, ಅಧಿಕಾರಿಗಳಿಗೆ ‘ನಿಮ್ಮ ಅಕ್ರಮ ಸಂಪಾದ್ನೇಲಿ ನಲವತ್ತು ಪರ್ಸೆಂಟ್ ಕಾಸು ಸರ್ಕಾರಕ್ಕೆ ಕಂದಾಯ, ಇಪ್ಪತ್ತು ಪರ್ಸೆಂಟ್ ಸಂಬಂಧಿಸಿದ ಮಂತ್ರಿಗೆ ಸಂದಾಯ ಮಾಡಿ
ಕ್ಲೀನ್ ಚಿಟ್ ತಕ್ಕಳಿ’ ಅಂದ್ರಾತಲ್ಲ. ಖೇಲ್ ಖತಂ, ನಾಟಕ್ ಬಂದ್’ ತುರೇಮಣೆ ಮಸ್ತು
ಐಡಿಯ ಕೊಟ್ರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.