ADVERTISEMENT

ಚುರುಮುರಿ: ಟಿಕೆಟ್ ಟೂರ್ನಿ

ಮಣ್ಣೆ ರಾಜು
Published 19 ಅಕ್ಟೋಬರ್ 2022, 23:15 IST
Last Updated 19 ಅಕ್ಟೋಬರ್ 2022, 23:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ನೋಡ್ರೀ, ಕಾಂಗ್ರೆಸ್‍ನವರು ಬಿಜೆಪಿಯವರಿಗೆ ಬೈಯ್ತಿದ್ದಾರೆ... ರಾಜಕಾರಣಿಗಳ ಬೀದಿ ಬೈಗುಳ ಕೇಳಲಾಗ್ತಿಲ್ಲ...’ ಸುಮಿ ಟಿ.ವಿ. ಮ್ಯೂಟ್ ಮಾಡಿದಳು.

‘ಇನ್ನೊಂದು ಚಾನೆಲ್ ಹಾಕಿ ನೋಡು, ಅದರಲ್ಲಿ ಬಿಜೆಪಿಯವರು ಕಾಂಗ್ರೆಸ್‍ನವರನ್ನು ಬೈಯ್ಯುತ್ತಿರುತ್ತಾರೆ’ ಅಂದ ಶಂಕ್ರಿ.

‘ದಿನಾ ಹೀಗೆ ಬೈಗುಳ ಬಿತ್ತರಿಸುತ್ತಿದ್ದರೆ ನಮ್ಮ ಟೀವಿ ಕೆಡೋದಿಲ್ವೇನ್ರೀ?’

ADVERTISEMENT

‘ಟೀವಿನೂ ಕೆಡಲ್ಲ, ಜನರೂ ಕೆಡೋದಿಲ್ಲ. ಎಲೆಕ್ಷನ್ ದೇವರು ಮೈಮೇಲೆ ಬಂದಾಗ ರಾಜಕಾರಣಿಗಳು ಪ್ರೇಕ್ಷಕರ ಮನರಂಜನೆಗಾಗಿ ಹೀಗೆ ಬೈದಾಡ್ತಾರೆ ಅಂತ ಎಲ್ಲರಿಗೂ ಗೊತ್ತು. ಇಷ್ಟವಾದರೆ ಆನಂದಿಸಬಹುದು, ಆಗದಿದ್ದರೆ ಅಸಹ್ಯಪಡಬಹುದು’.

‘ಈಗ ಎರಡು, ಮೂರನೇ ಸಾಲಿನ ನಾಯಕರೂ ಬೈದಾಟ ಶುರುಮಾಡಿದ್ದಾರೆ’.

‘ಟಿಕೆಟ್ ಟೂರ್ನಿಯ ಅರ್ಹತಾ ಸುತ್ತಿನ ಆಟ ಆರಂಭವಾಗಿದೆ. ಟಿಕೆಟ್ ಆಕಾಂಕ್ಷಿ ನಾಯಕರು ಎದುರಾಳಿಗಳನ್ನು ಬೈದು ಬೆಲೆ ಕಳೆದು, ತಮ್ಮ ನಾಯಕರ ಗಮನ ಸೆಳೆದು ಬೇಳೆ ಬೇಯಿಸಿಕೊಳ್ಳುವ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ’.

‘ಕುಟುಂಬಕ್ಕೊಂದೇ ಸೀಟು ಅಂತ ಬಿಜೆಪಿ ನಾಯಕರು ಕಟ್ಟಾದೇಶ ಮಾಡಿದ್ದಾರಂತೆ’.

‘ಹೌದು. ಮೊದಲಿನಂತೆ ಮಗನಿಗೊಂದು, ಮೈದುನನಿಗೊಂದು ಸೀಟು ಕಾಯ್ದಿರಿಸುವಂತಿಲ್ಲ. ಹೆಸರು ಕೆಡಿಸಿಕೊಳ್ಳದ, 70 ವರ್ಷ ವಯಸ್ಸು ಮೀರದ ಪಕ್ಷನಿಷ್ಠರಿಗೆ ಆದ್ಯತೆಯಂತೆ. ಅರ್ಹ ಸೀಟಾಕಾಂಕ್ಷಿಗಳು ತಮ್ಮ ಕ್ಯಾರೆಕ್ಟರ್ ಸರ್ಟಿಫಿಕೇಟ್, ಪ್ರೋಗ್ರೆಸ್ ರಿಪೋರ್ಟ್ ಸಲ್ಲಿಸುವುದು ಕಂಪಲ್ಸರಿ ಅಂತೆ’.

‘ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಡಿ ಕೊಡ್ತೀನಿ ಅಂತ ದೇವರಿಗೆ ಹರಕೆ ಮಾಡಿಕೊಳ್ಳೋದು ಸಹಜ. ಆದರೆ, ಕಾಂಗ್ರೆಸ್ 170 ಸೀಟು ಗೆದ್ದರೆ ತಮ್ಮ ಬೆರಳು ಕತ್ತರಿಸಿಕೊಡ್ತೀನಿ ಅಂತ ಬಿಜೆಪಿ ಶಾಸಕರೊಬ್ಬರು ಹರಕೆ ಹೊತ್ತಿದ್ದಾರಂತೆ ಕಣ್ರೀ’.

‘ಅದು ಹರಕೆ ಅಲ್ಲ, ಸವಾಲು. ಎಲೆಕ್ಷನ್ ಟೈಮಿನಲ್ಲಿ ಬೇರೆ ಪಕ್ಷದವರಿಗೆ ಬೆರಳು ಕೊಟ್ಟರೆ ಹಸ್ತವನ್ನೇ ನುಂಗಿಬಿಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಬೇಕಾದ್ರೆ ಕೈ ಕೊಡ್ತಾರೆ, ಬೆರಳು ಮಾತ್ರ ಕೊಡೋದಿಲ್ಲ...’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.