
‘ಪ್ರತಿ ಆ್ಯನಿವರ್ಸರಿಗೆ ಗೋಲ್ಡ್‌ದು ಏನಾದರೂ ಗಿಫ್ಟ್ ಕೊಡಸ್ತಿದ್ರಿ. ಈ ವರ್ಷ ಏನೂ ಕೊಡಿಸಲೇ ಇಲ್ವಲ್ರೀ...’ ಬೇಸರ ಮತ್ತು ಸಿಟ್ಟಿನಲ್ಲೇ ಪೀಠಿಕೆ ಹಾಕಿದಳು ಹೆಂಡತಿ.
‘ನೀನೇ ಚಿನ್ನ, ನಿನಗೇಕೆ ಬೇಕು ಚಿನ್ನ ಅಂತೆಲ್ಲ ಪೂಸಿ ಹೊಡಿತೀನಿ ಅಂತ ಅಂದ್ಕೊಬೇಡ, ಇನ್ಮುಂದೆ ಬಂಗಾರ ಕೊಡಿಸೋದೇ ಇಲ್ಲ’ ಕಡ್ಡಿ ಮುರಿದಂತೆ ಹೇಳಿದೆ.
‘ಯಾಕ್ರೀ ಹೀಗಂತೀರ, ಹೇಗಿದೆ ಮೈಗೆ’
‘ಗೋಲ್ಡ್ ರೇಟು ರಾಕೆಟ್ ಸ್ಪೀಡ್‌ನಲ್ಲಿ ಮೇಲಕ್ಕೆ ಹೋಗ್ತಿದೆಯಮ್ಮ’
‘ಚಿನ್ನ ಬೇಡ, ಬೆಳ್ಳಿಯಾದರೂ ಕೊಡಿಸಿ’
‘ಈಗ ಮೌನವಷ್ಟೇ ಅಲ್ಲ, ಮಾತೂ ದುಬಾರಿ’
‘ಅಂದ್ರೆ?’ ಗೊಂದಲದಲ್ಲಿ ಕೇಳಿದಳು ಹೆಂಡತಿ.
‘ಅಂದ್ರೆ, ಬೆಳ್ಳಿನೂ ನಾಗಾಲೋಟದಲ್ಲಿ ಓಡುತ್ತಿದೆ’
‘ಯಾಕ್ ಸುಳ್ಳು ಹೇಳ್ತಿರ‍್ರೀ... ಬೆಳ್ಳಿ ಇಳಿಕೆ ಅಂತ ಸುದ್ದಿ ಇದೆ ನೋಡಿ ಇಲ್ಲಿ’ ಪೇಪರ್ ಮುಖದ ಮುಂದೆ ಹಿಡಿದಳು.
‘ಲಕ್ಷದಲ್ಲಿ ಏರಿಕೆಯಾದರೆ, ಸಾವಿರದಲ್ಲಿ ಇಳಿಯುತ್ತೆ ಗೊತ್ತಾ’ ಎನ್ನುತ್ತಾ ಜಾಗ ಖಾಲಿ ಮಾಡಬೇಕು ಎನ್ನುವಷ್ಟ
ರಲ್ಲೇ, ‘ಇದೇನ್ರೀ ಇದು, ಎಪ್‌ಸ್ಟೈನ್ ಫೈಲ್ ಅನ್ನೋ
ದೇನೋ ಸುದ್ದಿ ಇದೆಯಲ್ಲ, ಹಂಗಂದ್ರೇನು...’ ಎಂದಳು.
‘ಜಗತ್ತಿನ ದೊಡ್ಡ ದೊಡ್ಡವರದೆಲ್ಲ ರಹಸ್ಯಗಳು ಆ ಫೈಲ್‌ನಲ್ಲಿ ಇವೆಯಂತೆ, ಅದರಲ್ಲಿ ಹೆಸರಿರೋರೆಲ್ಲ ಈಗ ಕುಣೀತಿದಾರೆ, ಬ್ಲ್ಯಾಕ್‌ಮೇಲ್ ಮಾಡೋರಿಗೆಲ್ಲ ಈಗ ಇದೇ ಹೊಸ ಅಸ್ತ್ರ’ ವಿವರಿಸಿದೆ.
ಥಟ್ಟನೇ ಏನೋ ಹೊಳೆದಂತೆ ಎದ್ದ ಹೆಂಡತಿ, ‘ನಿಮ್ಮ ಕಾಲೇಜು ದಿನಗಳ ಫೈಲ್ ಇಲ್ಲೇ ಎಲ್ಲೋ ನೋಡಿದಂಗಿತ್ತು ರೀ...’ ಎಂದಳು.
‘ಹೋಗ್ಲಿಬಿಡು ಆ ವಿಷಯವೆಲ್ಲ ಈಗ್ಯಾಕೆ... ನಿನಗೇನು ಬೇಕು, ಗೋಲ್ಡ್ ಚೈನ್ ಬೇಕಾ? ನೆಕ್ಲೇಸ್ ಬೇಕಾ?’ ಅರಿವಿಲ್ಲದೆ ನನ್ನ ಕಾಲು ಕುಣಿಯತೊಡಗಿತು.
‘ಇದ್ಯಾಕ್ರೀ, ಇದ್ದಕ್ಕಿದ್ದಂತೆ ಡಾನ್ಸ್ ಮಾಡೋಕೆ ಶುರು ಮಾಡಿದ್ರೀ, ಗೋಲ್ಡ್ ರೇಟ್ ಜಾಸ್ತಿ ಇದೆಯಲ್ವ, ನೆಕ್ಲೇಸ್ ತಗೊಂಡ್ರೇ ಟ್ಯಾಕ್ಸೂ ಜಾಸ್ತಿ ಬೀಳುತ್ತಲ್ವ?’
‘ನಿನಗಿಂತ ಚಿನ್ನ ಹೆಚ್ಚಿನದೇನಮ್ಮ, ಅದೆಷ್ಟೇ ರೇಟ್ ಆಗಲಿ, ಎಷ್ಟೇ ಟ್ಯಾಕ್ಸ್ ಬೀಳಲಿ. ಬಂಗಾರ ತರ್ತೀನಿರು ಬಂಗಾರ’ ಎನ್ನುತ್ತಾ ಹೊರಗಡಿಯಿಟ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.