ADVERTISEMENT

ಚುರುಮುರಿ: ‘ವೈರಲ್‌’ ಫೀವರ್‌

ಗುರು ಪಿ.ಎಸ್‌
Published 23 ಸೆಪ್ಟೆಂಬರ್ 2022, 17:30 IST
Last Updated 23 ಸೆಪ್ಟೆಂಬರ್ 2022, 17:30 IST
   

‘ನೋಡಿ ನೋಡಿ ನೋಡಿ ಸರ್, ಹೆಂಗ್ ವೈರಲ್ ಆಗ್ತಿದೆ ನಾನು ಕ್ರಿಯೇಟ್ ಮಾಡಿರೋ ಪೋಸ್ಟು, ಮಿಲಿಯನ್ ವ್ಯೂಸ್‌, ಥೌಸಂಡ್ ಶೇರ್ಸ್’ ಖುಷಿಯಿಂದ ಹೇಳ್ದ ಮಿನಿಸ್ಟರ್ ವಿಜಿ ಅವರ ಪಿಎ ಮುದ್ದಣ್ಣ.

‘ಆ ಕಮೆಂಟ್‌ಗಳನ್ನ ಓದ್ತಾ ಇದ್ರೆ ಎಷ್ಟ್ ಮಜಾ ಬರುತ್ತೆ. ಎದುರು ಪಾರ್ಟಿಯವರು ಕೊತ್ತಂಬರಿ ಗಿಡಕ್ಕೆ ನೇಣು ಹಾಕಿಕೊಳ್ಳೋದೊಂದು ಬಾಕಿ...’ ಬೆರಳೆಣಿಕೆ
ಯಷ್ಟು ಕೂದಲುಗಳಿದ್ದ ತಲೆಯನ್ನು ನೇವರಿಸಿಕೊಳ್ಳುತ್ತಾ ಖುಷಿಯಿಂದ ಹೇಳಿದ ವಿಜಿ.

‘ಯಾವುದೋ ಫೋಟೊಗೆ ಇನ್ಯಾವುದೋ ಫೋಟೊ ಜೋಡಿಸಿ, ಯಾವುದೋ ಸಂದರ್ಭದಲ್ಲಿ ತೆಗೆದ ಚಿತ್ರಕ್ಕೆ ಇನ್ನೇನೋ ಕ್ಯಾಪ್ಷನ್ ಬರೆದು, ಬ್ಯಾಕ್‌ಗ್ರೌಂಡ್‌ನಲ್ಲಿ ಭಯಾನಕ ಮ್ಯೂಸಿಕ್ ಹಾಕಿ ಪೋಸ್ಟ್ ಕ್ರಿಯೇಟ್ ಮಾಡಿದ್ರೆ ಮುಗೀತು ಸರ್, ಟ್ರೋಲು ಸೂಪರ್‍ರು.‌‌..’ ತನ್ನಲ್ಲಿನ ಕೌಶಲಗಳ ಬಗ್ಗೆ ಕೊಚ್ಚಿಕೊಳ್ಳತೊಡಗಿದ ಮುದ್ದಣ್ಣ.

ADVERTISEMENT

‘ಎದುರು ಪಾರ್ಟಿಯವರಿಗೆ ಒಂದೊಂದು ನಿಕ್ ನೇಮ್ ಕೂಡ ಇಡಬೇಕು ಮುದ್ದಣ್ಣ. ಬೆಪ್ಪು, ಕೆಪ್ಪು, ಮಿಸ್ಟರ್ ತಪ್ಪು... ಹೀಗೆ ಒಂದೊಂದು ಹೆಸರಿಟ್ಟುಬಿಟ್ಟರೆ ಫುಲ್ ವೈರಲ್ ಆಗಿಬಿಡ್ತಾವೆ ಪೋಸ್ಟ್‌ಗಳು’ ಖುಷಿಯಿಂದ ಸಲಹೆಗಳ ಸುರಿಮಳೆ ಸುರಿಸತೊಡಗಿದ ವಿಜಿ.

ಮರುದಿನ ಓಡಿಬಂದ ಮುದ್ದಣ್ಣ, ‘ಅಯ್ಯಯ್ಯಯ್ಯೋ, ಇಲ್ನೋಡಿ ಸರ್, ನಮ್ಮ ಪ್ಲ್ಯಾನ್ ನಮಗೇ ಉಲ್ಟಾ ಆಗಿದೆ... ನಿಮ್ಮ ಬಗ್ಗೆನೇ ಯಾರೋ ಸಖತ್ ಆಗಿರೋ ಪೋಸ್ಟ್ ಕ್ರಿಯೇಟ್ ಮಾಡಿ, ವೈರಲ್ ಮಾಡಿದಾರೆ...’

ವಿಜಿಯ ಕಿವಿ, ಮೂಗು, ಬಾಯಲ್ಲೆಲ್ಲ ಹೊಗೆ ಬಂದಂತಾಯಿತು. ‘ಇಡಿಯಟ್, ನೀನೇನು ಕತ್ತೆ ಕಾಯ್ತಿದ್ಯಾ, ಅವರು ಅಷ್ಟೆಲ್ಲ ಮಾಡೋವರೆಗೂ ಸುಮ್ಮನಿದ್ದು, ಈಗ ಸಖತ್ ಆಗಿದೆ ಅಂತ ನನ್ನ ಹತ್ತಿರವೇ ಹೊಗಳ್ತಿದೀಯಾ, ಅವರನ್ನೆಲ್ಲ ಒದ್ದು ಒಳಗೆ ಹಾಕ್ಸು...’ ಅರಚಿದ ವಿಜಿ.

‘ಇಷ್ಟ್ ದಿನ ನಾವು ಮಾಡ್ತಿದ್ದುದನ್ನೇ ಅವರೂ ಮಾಡಿದ್ದಾರೆ ಸರ್... ಆದರೆ, ಒಂದೇ ವ್ಯತ್ಯಾಸವಿದೆ’.

‘ಏನು?’

‘ಅವರ ಪೋಸ್ಟ್‌ನಲ್ಲಿ ಸ್ವಲ್ಪ ಸತ್ಯ ಇದೆ...’ ಹೊರಗೋಡಿದ ಮುದ್ದಣ್ಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.