‘ನಂದಿನಿ ಹಾಲೇ ಸಿಕ್ತಾ ಇಲ್ಲ ಅಂತ ಸುದ್ದಿಯಾಗ್ಯದಲ್ಲಾ ಸಾ?’ ಕೈಯ್ಯಲ್ಲಿ ನಂದಿನಿ ಹಾಲಿನ ಪ್ಯಾಕೆಟ್ ಹಿಡಕಬಂದ ತುರೇಮಣೆಗೆ ಕೇಳಿದೆ.
‘ಪರರಾಜ್ಯದ ಹುಲಿಗೆ ಹೆದರಿ ನಂದಿನಿ ಕಾಣ್ತಿಲ್ಲ ಅಂತ, ಆಗದೋರು ಹಾಲಿಗೆ ಹಾಲಾಹಲ ಹಿಂಡಿಬುಟ್ಟವ್ರೆ. ನಾವು ನಂದಿನಿ ಹಾಲುಮತದೋರು ಅಂತ ಜನ ತೀರ್ಮಾನ ತಕ್ಕಂದು ಪುಣ್ಯಕೋಟಿಯನ್ನ ಉಳಿಸಬಕು’ ಅಂದ್ರು ತುರೇಮಣೆ.
‘ಅಲ್ಲ ಕನ್ರೋ ‘ನಮ್ಮ ಹಸ ನನಗೆ ವದ್ದುಬುಟ್ಟದೆ. ನಾನು ಹಾಲು ಕರೆಯೋ ಪಕ್ಸಕ್ಕೋಯ್ತಿನಿ’ ಅಂತಾವ್ರಂತೆ ಟಿಕೇಟು ಸಿಕ್ಕದೋರು?’ ಯಂಟಪ್ಪಣ್ಣ ರೇಗಿತು.
‘ಎಮ್ಮೆಲ್ಲೆ ಸೀಟು ತಮ್ಮ ಪಿತ್ರಾರ್ಜಿತವಾದ ಆಸ್ತಿ ಅನ್ನಂಗೆ ಟಿಕೇಟು ಸಿಕ್ಕದಿರೋ ಸಾಸಕರು ಕಣ್ಣಿರಾಕ್ತಾ ಕೂತಿದ್ರೆ ಇನ್ನು ಕೆಲವರು ಟಿಕೇಟು ಯಾಕೆ ಕೊಡಕಿಲ್ಲ ಅಂತ ಜಗಳಕ್ಕೆ ಬಿದ್ದವ್ರೆ ಕನಣೈ. ಇಂತಾ ಸಭ್ಯರ್ಥಿಗಳು ಬಂದಾರ ಅಂತ ಕೆಲವು ಪಕ್ಸಗಳು ಗಾಳ ಹಿಡಕಂದು ಕದ್ದು ನೋಡುವ ತಂತ್ರ ಅನುಸರಿಸ್ತಾ ಕುಂತವಂತೆ’ ಅಂತಂದೆ.
‘ಕೈಲಾಗದೋರೂ ಟಿಕೇಟು ಬೇಕೇ ಬೇಕು ಅಂತ ನಿಗುರಾಡ್ತಾವ್ರೆ ಕಪ್ಪಾ. ಗೆಯ್ಯಕ್ಕಾಗದ ಈ ಕಳ್ಳೆತ್ತುಗಳ ನಂಬಿದ್ರೆ ನಾವು ಉದ್ಧಾರಾಯ್ತಿವಾ’ ಯಂಟಪ್ಪಣ್ಣ ಮಂಗಳಾಷ್ಟಕ ಪಠಿಸಿತು.
‘ನೋಡ್ರೋ ಒಳ್ಳೆ ಕ್ಯಾಂಡಿಡೇಟಿಗೆ ವೋಟಾಕಬೇಕು ಅಂತ ನನಗೂ ಆಸೆ ಅದೆ. ಒಳ್ಳೆ ಜನ ಎಲೆಕ್ಷನ್ನಿಗೆ ನಿಲ್ಲಕುಲ್ಲ ಅಂದಮ್ಯಾಲೆ ವೋಟಾಕದ್ಯಾಕೆ’ ತುರೇಮಣೆ ಬೇಜಾರಾದ್ರು.
‘ನೀನೇಳದು ದಿಟ ಕನೋ. ಮತದಾರರೆಲ್ಲಾ ತಪ್ಪದೇ ವೋಟು ಮಾಡಬಕು ಅಂತ ಭಗವಂತ ಹೇಳ್ತನೆ. ಆದ್ರೆ ಆಯಪ್ಪನು ಒಳ್ಳೆ ಕ್ಯಾಂಡಿಡೇಟು ಕೊಡದೇ ನಮ್ಮನ್ನ ತಬ್ಬಲಿಗಳನ್ನ ಮಾಡಿ ಹುಲಿಗಳ ಕೈಗೆ ಕೊಡ್ತಾವ್ನಲ್ಲ’ ಯಂಟಪ್ಪಣ್ಣ ಗಾಬರಿಯಾಯ್ತು.
‘ಅದಕೇನು ಮಾಡಬಕು ಅಂತೀರಿ?’ ಅಂತ ಕೇಳಿದೆ.
‘ಸುಳ್ಳು ಆಶ್ವಾಸನೆ ಕೊಡ್ತಿರೋ ಕ್ಯಾಂಡಿಡೇಟು
ಗಳಿಗೆ ಜನ ‘ನೀವು ನಮಗೆ ಸುಳ್ಳು ಹೇಳದು ನಿಲ್ಲಿಸದಿದ್ರೆ ನಾವು ನಿಮ್ಮ ಬಗ್ಗೆ ನಿಜ ಹೇಳಕ್ಕೆ ಸುರು ಮಾಡಬೇಕಾಯ್ತದೆ’ ಅಂತ ಜಬರಿಸಿ ಕೇಳಬೇಕು ಕನ್ರೋ’ ಅಂದ್ರು ತುರೇಮಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.