ADVERTISEMENT

ಚುರುಮುರಿ: ಜಾತಿ ಫಜೀತಿ

ಬಿ.ಆರ್.ಸುಬ್ರಹ್ಮಣ್ಯ
Published 25 ಡಿಸೆಂಬರ್ 2020, 19:00 IST
Last Updated 25 ಡಿಸೆಂಬರ್ 2020, 19:00 IST
   

‘ಎಲ್ಲಿಮಟ ಮನ್‍ಷನ್ ಮನ್ಸಲ್ ಭಯ ಇರ್ತತೋ, ಅಲ್ಲಿಮಟ ಜಗತ್‌ನ್ಯಾಗೆ ದೆವ್ವಭೂತ ಓಡಾಡ್‍ಕ್ಯಂದಿರ್ತಾವು’ ತತ್ವಜ್ಞಾನಿಯಂತೆ ಡೈಲಾಗ್ ಹೊಡೆದ ಚಂಬಸ್ಯ ‘ಎಲ್ಲಿ, ನೀನೂ ಈ ಥರ ಒಂದ್ಮಾತು ಹೇಳಲೇ’ ಎಂದು ರುದ್ರೇಶಿಗೆ ಸವಾಲೆಸೆದ.

ತುಸು ಯೋಚಿಸಿದ ರುದ್ರೇಶಿ ‘ಎಲ್ಲಿಮಟ ಜನ್ರು ಮನ್ಸಲ್ ಜಾತಿಭೂತ ಇರ್ತತೋ, ಅಲ್ಲಿಮಟ ರಾಜ್ಯದಾಗೆ ಮಠಗೋಳು ರಾಜ್ಕೀಯ ಮಾಡ್‍ಕ್ಯಂದಿರ್ತಾವು’.

ಇದನ್ನು ಕೇಳಿ ತಬ್ಬಿಬ್ಬಾದ ಚಂಬಸ್ಯ ‘ನೋಡಪ್ಪಜ್ಜಿ, ಡ್ಯಾಮೇಜಿಂಗ್ ಸ್ಟೇಟ್‍ಮೆಂಟ್ ಕೊಟ್ಟು ಕಾಂಟ್ರವರ್ಸಿ ಮಾಡ್‍ಬ್ಯಾಡ. ಮಠಗಳ ಬಗ್ಗೆ ಮಾತಾಡದುಕ್ಕೆ ನಮಗೆಲ್ಲೈತಿ ಪವರ್‍ರು? ಅಷ್ಟಕ್ಕೂ ದೊಡ್‌ ದೊಡ್ಡ ವಿಸ್ಯಗೋಳ್ ನಮಗ್ಯಾಕಿಪ್ಪಟ್ಟು?’ ಅಂದ.

ADVERTISEMENT

‘ಅಯ್ಯೋ ಇವ್ನ... ಇದ್ದುದ್ ಇದ್ದಂಗ್ಹೇಳಿದ್ರೆ ಎದ್‌ಬಂದ್ ಎದಿಗೊದ್ರಂತೆ! ಮದ್ಲೇ ದೇಸ್ದಾಗೆ ಹಳ್ಳಿ ಪಂಚಾಯ್ತಿಯಿಂದ ದಿಲ್ಲಿ ಪಂಚಾಯ್ತಿಮಟ ಜಾತಿ ಲೆಕ್ಕಾಚಾರದ್ ಪಿಡುಗು ಹರಡ್‍ಕ್ಯಂದೈತಿ. ಅದ್‍ಸಾಲ್ದು ಅಂತ ಮಠದೊಳೀಕ್ಕಿಂದ್ಲೂ ಈಗ ಅದೇ ರಾಜ್ಕೀಯ ಪವರ್‌ ಪ್ಲೇ ಆಡಕ್ಹತ್ತೈತಿ. ಇದು ಒಳ್ಳೆ ಬೆಳವಣಿಗಿ ಅಲ್ಕಣಲೇ’.

‘ಪ್ರತಿಯೊಂದ್ ಸಮುದಾಯಕ್ಕೂ ತನ್ನ ಸಂಘಟನಿ ಮಾಡ್‍ಕ್ಯಂದು ಸಮಾಜದಾಗೆ ಮುನ್ನೆಲಿಗ್ ಬರೋ ಅಗತ್ಯ ಇರ್ತತಿ. ಅದುಕ್ಕೇ ಆಯಾ ಜಾತಿ ಮಠಗಳು ಸಮಾನ ಹಕ್ಕುಗಳ ಬೇಡಿಕಿ ಇಡ್ತಾವು. ಇದುನ್ನ ತಪ್ಪಂತಿಯಾ?’

‘ತಪ್ಪೋವಪ್ಪೋ ಗೊತ್ತುಲ್ಲ. ಭೀತಿಗಿಂತ ಮಿಗಿಲಾದ ಭೂತವಿಲ್ಲ ಅನ್ನೋ ಗಾದೆ ಈಗ ಜಾತಿಗಿಂತ ಮಿಗಿಲಾದ ಭೂತವಿಲ್ಲ ಅನ್ನಂಗಾಗೇತಿ. ಗುಡಿ ಚರ್ಚು ಮಸಜೀದಿಗಳ ಬಿಟ್ಟುಬನ್ನಿ ಅಂದಿದ್ದ ಕುವೆಂಪು ಅವ್ರು ಇವತ್ತೇನಾರ ಬದುಕಿದ್ದುದ್ರೆ ಮಠಗಳನ್ನೂ ಬಿಟ್ಟು ಹೊರಬನ್ನಿ ಅಂದಿರ್ತುದ್ರು. ಮಠಗಳು ಕಿಂಗ್ ಗೈಡ್ ಆಗಬೇಕೇ ಹೊರತು ಕಿಂಗ್ ಮೇಕರ್ ಆಗದುಕ್ಕ್ ಹೋಗಬಾರ್ದು’.

‘ಹೋಗ್ಲಿ ಬಿಡಪ್ಪಜ್ಜಿ. ಈ ಜಾತಿ, ರಾಜ್ಕೀಯ, ಎಲೆಕ್ಸನ್ನು ಇದುನ್ನೆಲ್ಲ ಕೇಳಿ ಕೇಳಿ ತಲಿ ಕೆಟ್ಟ್ ಹನ್ನೆರ್ಡಾಣಿ ಆಗೇತಿ. ಇಪ್ಪಟ್ಟ್ ವಸ ವರ್ಸಕ್ಕ್ ಎಲ್ಯಾರ ಟೂರ್ ಹೋಗಿಬರಾನ ಬಾ’ ಎಂದು ಚಂಬಸ್ಯ ಮಾತು ಹಾರಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.