ADVERTISEMENT

ಚುರುಮುರಿ: ಎಣ್ಣೆ ಏಟು

ಮಣ್ಣೆ ರಾಜು
Published 16 ಫೆಬ್ರುವರಿ 2021, 19:30 IST
Last Updated 16 ಫೆಬ್ರುವರಿ 2021, 19:30 IST
   

‘ಎಣ್ಣೆ ರೇಟು ದುಬಾರಿಯಾಗಿದೆ...’ ಚಿತ್ರಾನ್ನದ ಒಗ್ಗರಣೆ ಸಿಡಿಸಿದಳು ಸುಮಿ.

‘ಹೌದು, ಎಣ್ಣೆ ಏಟಿಗೆ ಅಬಕಾರಿ ಆರಾಧಕರು ಭಿಕಾರಿಗಳಾಗ್ತಿದ್ದಾರೆ...’ ಅಂದ ಶಂಕ್ರಿ.

‘ನಾನು ಹೇಳಿದ್ದು ಅಡುಗೆ ಎಣ್ಣೆ ಬೆಲೆರೀ...’

ADVERTISEMENT

‘ಎಣ್ಣೆಯಲ್ಲಿ ವಡೆ, ಬೋಂಡ ತೇಲಿಸಬೇಡ, ನಾವು ಮುಳುಗ್ತೀವಿ...’

‘ಇನ್ಮೇಲೆ ಆಯಿಲ್‍ಲೆಸ್ ಅಡುಗೆ, ತಿಂಡಿನೇ ತಿನ್ನಬೇಕು’ ತಿಂಡಿ ತಂದು ಬಡಿಸಿದಳು.

‘ಆಯಿಲ್‌ಲೆಸ್ ಅಡುಗೆ ಓಕೆ, ಬೈಕ್ ಆಯಿಲ್‌ಲೆಸ್ ಅಲ್ಲವಲ್ಲ, ಪೆಟ್ರೋಲ್ ತುಂಬಿಸಲೇಬೇಕು’ ಅಂದಳು ಮಗಳು ಪಮ್ಮಿ.

‘ಬೈಕ್ ಬಿಟ್ಟು ಸೈಕಲ್‍ನಲ್ಲಿ ಆಫೀಸ್‍ಗೆ ಹೋಗ್ತೀನಿ’.

‘ಬೆಳಿಗ್ಗೆ ಸೈಕಲ್ ಹತ್ತಿದರೆ ಲಂಚ್ ಟೈಮ್‌ಗೆ ಆಫೀಸ್ ತಲುಪುತ್ತಾರೆ ಅಷ್ಟೇ. ಸೈಕಲ್ ಬದಲು ಪೆಟ್ರೋಲ್‌ಲೆಸ್ ಕತ್ತೆನೋ ಕುದುರೆನೋ ಹತ್ತಿಕೊಂಡು ಹೋಗ್ರೀ’ ಅಂದಳು ಸುಮಿ.

‘ಮೇಂಟೆನೆನ್ಸ್ ಕಮ್ಮಿ ಇದ್ದರೂ ಕತ್ತೆ ಮೈಲೇಜ್ ಕೊಡೋದಿಲ್ಲ. ಕುದುರೆ ಕೊಂಡುಕೊಳ್ಳಿ ಡ್ಯಾಡಿ’ ಅಂದಳು ಪಮ್ಮಿ.

‘ಹೌದು, ಕೊಂಡುಕೊಳ್ಳಿ. ಹುರುಳಿ ತಿನ್ನಿಸಿ, ಮಾಲೀಶ್ ಮಾಡಿದರೆ ಕುದುರೆ ಒಳ್ಳೆ ಮೈಲೇಜ್ ಕೊಡುತ್ತೆ. ಕಾರು ಶೆಡ್ಡನ್ನು ಲಾಯ ಮಾಡಿಕೊಳ್ಳೋಣ’ ಅಂದ ಶಂಕ್ರಿ.

‘ನಾನೂ ಹಾರ್ಸ್ ರೈಡಿಂಗ್ ಟ್ರೈನಿಂಗ್ ಸ್ಕೂಲ್ ಸೇರಿ ಕುದುರೆ ಸವಾರಿ ಕಲಿತುಕೊಳ್ತೀನಿ. ಕುದುರೆಗೆ ಡಿ.ಎಲ್, ಇನ್ಷೂರೆನ್ಸ್, ಹೆಲ್ಮೆಟ್ ಬೇಕಾಗೋದಿಲ್ಲ’ ಪಮ್ಮಿ ಆಸೆಪಟ್ಟಳು.

‘ಹಿಂದೆ ರಾಜ-ಮಹಾರಾಜರೆಲ್ಲಾ ಕುದುರೆ ಸವಾರಿ ಮಾಡಿಕೊಂಡು ರಾಜ್ಯಭಾರ ಮಾಡ್ತಿದ್ರು. ಕಾಡಿಗೆ ಹೋಗಿ ಬೇಟೆಯಾಡುತ್ತಿದ್ರು’.

‘ನಾವು ಹಿಂದಕ್ಕೆ ಹೋಗ್ತಾ ಇದ್ದೀವಾ...? ಆಧುನಿಕತೆಯಿಂದ ಆದಿಮಾನವರಾಗುವತ್ತ ಸಾಗ್ತಾ ಇದ್ದೀವಾ?!’

‘ದಿನಬಳಕೆ ಪದಾರ್ಥಗಳ ಬೆಲೆ ಹೀಗೇ ಏರುತ್ತಿದ್ದರೆ, ನಾವೂ ಆದಿಮಾನವರಂತೆ ಕಾಡಿನಲ್ಲಿ ಗೆಡ್ಡೆಗೆಣಸು ತಂದು ತಿಂದು ಬದುಕಬೇಕಾಗುತ್ತದೆ’ ಅಂದ ಶಂಕ್ರಿ.

‘ಹಾಗೆ ಬದುಕಲೂ ಈಗ ಕಾಡೂ ಇಲ್ಲ, ಗೆಡ್ಡೆಗೆಣಸೂ ಇಲ್ಲವಲ್ಲಾರೀ...’ ಸುಮಿ ಆತಂಕಗೊಂಡಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.