
‘ನಿಮಗೆ ಮಂತ್ರಿ ಸ್ಥಾನ ಸಿಗಲೆಂದು ದೇವಸ್ಥಾನದಲ್ಲಿ ಉರುಳುಸೇವೆ ಮಾಡಿ, ಪೂಜೆ ಮಾಡಿಸಿದೆವು’ ಎಂದು ಬೆಂಬಲಿಗರು ಬಂದು ಶಾಸಕರಿಗೆ ಪ್ರಸಾದ ಕೊಟ್ಟರು.
‘ನೀವು ಮಂತ್ರಿಯಾದರೆ ಮುಡಿ ಕೊಡ್ತೀವಿ ಅಂತ ನಾವೆಲ್ಲಾ ದೇವರಲ್ಲಿ ಹರಕೆ ಮಾಡಿಕೊಂಡಿದ್ದೀವಿ ಸಾರ್’ ಎಂದ ಒಬ್ಬ.
ಶಾಸಕರು ನಿಟ್ಟುಸಿರುಬಿಟ್ಟರು. ‘ನಿಮ್ಮ ದೇವರು ಒಪ್ಪಿದರೆ ಸಾಕಾಗುವುದಿಲ್ಲ, ನಮ್ಮ ದೇವರು ಒಲಿದು ವರ ಕೊಡಬೇಕು ಕಣ್ರೋ’ ಅಂದರು.
‘ನಿಮ್ಮ ಕುಲದೇವರು ಯಾವುದು ಸಾರ್?’
‘ಹೈಕಮಾಂಡ್, ದೆಹಲಿ ದೇವರು!’
‘ಮತದಾರರೇ ದೇವರು ಎಂದು ಎಲೆಕ್ಷನ್ ಟೈಮಿನಲ್ಲಿ ಹೇಳಿದ್ರಲ್ಲಾ ಸಾರ್, ಪಕ್ಷ ಬದಲಾಯಿಸುವಂತೆ ಈಗ ದೇವರನ್ನೂ ಬದಲಾಯಿಸಿಬಿಟ್ಟಿರಾ?’
‘ಹಾಗಲ್ವೋ, ಶಾಸಕರಾಗಲು ಮತದಾರ ದೇವರು ಬೇಕು, ಮಂತ್ರಿ–ಮುಖ್ಯಮಂತ್ರಿ ಪದವಿ ಕೊಡೋದು ದೆಹಲಿ ದೇವರು ಕಣ್ರೋ’.
‘ದೆಹಲಿ ದೇವರಿಗೂ ಕಾಯಿ ಒಡೆದು, ಕರ್ಪೂರ ಹಚ್ಚಿ ಮಂಗಳಾರತಿ ಮಾಡಿ ಸಾರ್, ದೇವರು ವರ ಕೊಡ್ತಾರೆ’ ಎಂದ ಇನ್ನೊಬ್ಬ.
‘ದೆಹಲಿ ದೇವರನ್ನು ಕ್ಷೇತ್ರಕ್ಕೆ ಆಹ್ವಾನಿಸಿ ಔತಣ, ಅಭಿಷೇಕ, ಅದ್ದೂರಿ ಉತ್ಸವ ಮಾಡೋಣ’ ಮತ್ತೊಬ್ಬ ಹೇಳಿದ.
‘ಪೂಜೆ, ಉತ್ಸವಕ್ಕೆ ದೆಹಲಿ ದೇವರು ಒಲಿಯುವುದಿಲ್ಲ’ ಶಾಸಕರು ತಲೆ ಅಲ್ಲಾಡಿಸಿದರು.
‘ಹುಂಡಿಗೆ ದುಡ್ಡು ಹಾಕಿ ನಮ್ಮಿಂದ ತಪ್ಪುಗಳಾಗಿದ್ದರೆ ಕ್ಷಮಿಸು ಪರಮಾತ್ಮ ಎಂದು ನಾವು ನಮ್ಮ ದೇವರಿಗೆ ಕೋರಿಕೊಳ್ತೀವಿ. ನೀವೂ ಏನಾದರೂ ಲೋಪ–ಪಾಪ ಮಾಡಿದ್ದರೆ ತಪ್ಪುಕಾಣಿಕೆ, ಕಪ್ಪಕಾಣಿಕೆ ಕೊಟ್ಟು ಪರಿಹಾರ ಮಾಡಿಕೊಳ್ಳಿ ಸಾರ್’.
‘ಸದ್ಯಕ್ಕೆ ನಿತ್ಯ ನಿಷ್ಠೆಯಿಂದ ದೆಹಲಿ ದೇವರ ಧ್ಯಾನ, ಭಜನೆ ಮಾಡುತ್ತಿದ್ದೇನೆ...’
‘ದೆಹಲಿ ದೇವರು ನಿಮಗೆ ಮಂತ್ರಿ ಪದವಿ ಕೊಡದಿದ್ದರೆ ಏನು ಮಾಡ್ತೀರಿ?’
‘ತೆಪ್ಪಗಿರ್ತಿನಿ. ದೆಹಲಿ ದೇವರ ಎದುರು ಹಾಕಿಕೊಂಡು ಬಾಳಲಾಗುತ್ತೇನ್ರೋ... ಕೋಪ ಬಂದರೆ ಶಾಪ ಕೊಟ್ಟು ಬಿಡುತ್ತೆ!’ ಎಂದರು ಶಾಸಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.