ADVERTISEMENT

ಚುರುಮುರಿ: ‘ಟ್ರಂಪ್’ರೇಚರ್

ಮಣ್ಣೆ ರಾಜು
Published 12 ಆಗಸ್ಟ್ 2025, 23:30 IST
Last Updated 12 ಆಗಸ್ಟ್ 2025, 23:30 IST
   

ಮಳೆಯಲ್ಲಿ ನೆಂದು ಬಂದ ಶಂಕ್ರಿಗೆ ಸುಮಿ ಕಾಫಿ ಕೊಟ್ಟು, ‘ಮೈ ಬಿಸಿ ಮಾಡಿಕೊಳ್ಳಿ. ಬಿಸಿಯಾಗದಿದ್ದರೆ ನ್ಯೂಸ್‌ ಪೇಪರ್ ಓದಿ, ಮೈ ಜೊತೆಗೆ ತಲೆಯೂ ಬಿಸಿಯಾಗುತ್ತದೆ’ ಎಂದು ಪೇಪರ್ ಕೊಟ್ಟಳು.

‘ಕಾವೇರಿಸುವ ನ್ಯೂಸ್‌ಗಿಂಥಾ ಬಿ.ಪಿ ಏರಿಸುವ ಸುದ್ದಿಗಳೇ ಜಾಸ್ತಿ ಇರುತ್ತವೆ’ ಅಂದ ಶಂಕ್ರಿ.

‘ರಾಜಕಾರಣಿಗಳು ಒಬ್ಬರನ್ನೊಬ್ಬರು ಟೀಕಿಸಿಕೊಂಡು ‘ಅವಮಾನ ವೈಪರೀತ್ಯ’ವಾಗಿ ರಾಜಕೀಯ ವಾತಾವರಣ ಕಾವೇರಿದೆ’.

ADVERTISEMENT

‘ಮತ ಕಳವಾಗಿವೆ ಎಂದು ರಾಹುಲ್ ಗಾಂಧಿ ಮತಗಳನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಮತಗಳು ಎಲ್ಲಿ ಕಳೆದುಹೋದವಂತೆ?’

‘ಎಲ್ಲೂ ಹೋಗಿಲ್ಲವಂತೆ, ಇವರ ಮತಗಳು ಬಿಜೆಪಿಯವರಿಗೆ ‘ಮತಾಂತರ’ ಆಗಿವೆಯಂತೆ’.

‘ಮತಯಂತ್ರದ ದೋಷವಿರಬೇಕು’.

‘ಅಲ್ಲವಂತೆ, ‘ಮತಮಂತ್ರ’ದ ದೋಷ ಎಂದು ರಾಹುಲ್ ಗಾಂಧಿ ಸಿಟ್ಟಿಗೆದ್ದು ಚುನಾವಣೆ ಆಯೋಗಕ್ಕೂ ಬಿಜೆಪಿಗೂ ತಲೆ ಬಿಸಿ ಮಾಡಿದ್ದಾರಂತೆ’.

‘ನಮ್ಮಲ್ಲೇ ಇಷ್ಟೊಂದು ಟೆಂಪರೇಚರ್ ಇರುವಾಗ, ಅಮೆರಿಕದ ಟ್ರಂಪ್ ಪದೇ ಪದೇ ಸಹಿಸಲಾಗದ ‘ಟ್ರಂಪ್’ರೇಚರ್ ಹೇಳಿಕೆ ಕೊಡ್ತಿದ್ದಾರೆ’.

‘ಮಧ್ಯಸ್ಥಿಕೆ ವಹಿಸಿ ಭಾರತ–ಪಾಕಿಸ್ತಾನ ನಡುವಿನ ಸಂಘರ್ಷ ನಿಲ್ಲಿಸಿದೆ ಎಂಬ ಟ್ರಂಪ್ ಹೇಳಿಕೆ ನಮ್ಮ ಆಡಳಿತ, ವಿರೋಧ ಪಕ್ಷದವರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ’.

‘ರಾಜಕೀಯ ಪಕ್ಷಗಳ ಸಂಘರ್ಷ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದರೆ ಟ್ರಂಪ್‌ಗೆ ನೊಬೆಲ್ ಸಿಗಬಹುದು’.

‘ದೇಶಗಳ ನಡುವಿನ ಸಂಘರ್ಷಕ್ಕೆ ಮಾತ್ರ ಅವರು ತಲೆ ತೂರಿಸುತ್ತಾರಂತೆ’.

‘ನಮ್ಮ ದೇಶದ ಆರ್ಥಿಕತೆ ಸತ್ತು ಹೋಗಿದೆ ಎಂದು ನಮ್ಮ ವ್ಯವಹಾರಕ್ಕೆ ಮೂಗು ತೂರಿಸಿದ್ದಾರೆ. ನಮ್ಮ ಪದಾರ್ಥಗಳ ಆಮದಿಗೆ 50 ಪರ್ಸೆಂಟ್ ಸುಂಕ ವಿಧಿಸಿದ್ದಾರೆ’.

‘ಟ್ರಂಪ್‌ಗೆ ಕೋಪ ಬಂದಾಗಲೆಲ್ಲಾ ಸುಂಕದೇಟು ಕೊಡ್ತಾರೆ’.

‘50 ಪರ್ಸೆಂಟ್ ಸುಂಕ ಜಾಸ್ತಿಯಾಯ್ತು, ಡಿಸ್ಕೌಂಟ್ ಕೊಡಿ ಅಂತ ಕೇಳಿಕೊಳ್ಳಬೇಕು’.

‘ಕೇಳಬಾರದು, ಸುಂಕದವರ ಮುಂದೆ ಸುಖ–ದುಃಖ ಹೇಳಿಕೊಳ್ಳಬಾರದು’ ಅಂದಳು ಸುಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.