‘ಅಣ್ತಮ್ಮದೀರು ಅಂದಮ್ಯಾಲೆ ಏಡು ಮಾತು ಬತ್ತವೆ, ಹೋಯ್ತವೆ. ಅದುಕ್ಕೆ ಸಿಟುಗಂದು ಮಾತು ಬುಟ್ಟು ಆಗದೋರ ಜೊತೆಗೆ ಸೇರಿಕ್ಯಂದ್ರೆ ಆದದೇ?’ ತುರೇಮಣೆ ಯಾವುದೋ ವಿಷಯ ತೆಗೆದರು.
‘ಏನು ಮಾತಾಡ್ತಿದೀರಿ ನೀವು? ಯಾವ ಅಣ್ತಮ್ಮದೀರು? ಸಿಟ್ಟುಗಂದೋರು ಯಾರು?’ ಅಡ್ಡ ಮಾತಾಡಿದೆ.
‘ಅಣ್ಣನ ಬುಟ್ಟು ಬ್ಯಾರೇರ ತಾವು ಪೆಟ್ರೋಲೆಣ್ಣೆ ತಗಂದ್ರೆ ಕ್ವಾಪ ಬರಕುಲ್ವಾ? ಆಯ್ತು ಕಪ್ಪಾ, ನಿನ್ನ ನ್ಯಾಯ ಪಂಚಾತ್ಕೆ ಇಂದ್ಲೇ ಯುದ್ಧ ಪೈಸಲ್ ಆದುದ್ದು ಅಂದುದ್ರೆ ಏನಾಗದು? ಮೊನ್ನೆ ಟ್ರಂಪಣ್ಣ ಈಥರಕೀತರ ಅಂತ ಹೇಳಿಕ್ಯಂದು, ವಿಶ್ವಗುರುಗಳು ಯಾಕಿಂಗೆ ಮಾಡ್ತಾವ್ರೋ, ಕಾಣೆ ಕನುಡಾ ಅಂತ ಕಣ್ಣಗೆ ನೀರಾಕ್ಯಂದ’ ತುರೇಮಣೆ ವಿವರಿಸಿದರು.
‘ಟ್ರಂಪಣ್ಣ ಗೂಗಲ್ ಸುಂದ್ರಣ್ಣನ್ನ, ಮೈಕ್ರೋಸಾಫ್ಟು ಸತ್ಯಣ್ಣನ್ನ ಕರೆಸಿ, ಯಂಗದೀರ ಇವರೇ? ನಮ್ಮ ದೇಸದಲ್ಲಿ ಕಂಡಾಬಟ್ಟೆ ಬಂಡವಾಳ ಹಾಕ್ರಿ. ಎಲ್ಲಾರೂವೆ ಅಮೆರಿಕ ಪಸ್ಟು ಅನ್ನಬೇಕು. ಭಾರತದೋರು ಆವತ್ತು ನಾವು ಕೊಡ್ತಿದ್ದ ಕೇರುಪ್ಪಿಟ್ಟು, ಹಾಲಿನ ಪುಡಿಗೆ ಕಾಯ್ತಿದ್ರು. ಈಗ ನೋಡು... ಅಂತ ಸಿಟ್ಟಾಗ್ಯವನಂತೆ’ ಅಂದೆ ನಾನು.
‘ಟ್ರಂಪಣ್ಣಗೆ ತಿಳೀದು ಕಲಾ, ಸಾಲು ನೆಟ್ಟಗಿದ್ರೆ ಸೊಲ್ಲು ನೆಟ್ಟಗಿರತದೆ ಅಂತ. ಭಾರತದೋರು ಅಮೆರಿಕದಿಂದ ನೂರು ರೂಪಾಯಿ ಕಳುಸಿದ್ರೆ ಅದುಕ್ಕೆ ನಾವೂ ನೂರು ರೂಪಾಯಿ ಟ್ಯಾಕ್ಸು ಹಾಕಿದ್ರಾತು. ಅಮೆರಿಕದ ಎಕಾನಮಿಗೆ ಗುಮ್ಮಕೆ ಸಾಕಲ್ಲವಾ?’ ಅಂದ ತಿಪ್ಪಣ್ಣ.
‘ಅಲ್ಲಕಾ ಇವನೇ, ಅಮೆರಿಕಕ್ಕೆ ನಮ್ಮ ರಾಜಕೀಯದ ಪಂಟ್ರುಗಳ ಕಳುಸಿದ್ರೆ ಸಾಕು ಕನೋ. ಧರ್ಮ, ಜಾತಿಗಣತಿ ಅಂತ ಅಮೆರಿಕವ ಏಡು ತುಂಡಾಕಿ ಬುಡ್ತರೆ. ಬಿಬಿಎಂಪಿ, ಬಿಡಿಎ, ಒಳಚರಂಡಿ, ವಿದ್ಯುತ್ ನಿಗಮದೋವು ಏನೂ ಕಮ್ಮಿ ಇಲ್ಲ. ಇವು ರೋಡೆಲ್ಲಾ ಗುಂಡಿ ಬೀಳಿಸಿ ಜನ ಈಚೆಗೆ ಕಡೀದಂಗೆ ಮಾಡಿ ಇಡೀ ಅಮೆರಿಕದ ಜನ ‘ಇದ್ಯಂತ ಬದುಕು ಕಪ್ಪಾ’ ಅನ್ನಂಗೆ ಮಾಡ್ತರೆ...’ ಯಂಟಪ್ಪಣ್ಣನ ಮಾತಿಗೆ ನಾವು ಬೆಪ್ಪಾದೆವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.