ADVERTISEMENT

ಚುರುಮುರಿ: ಗೊಬ್ಬರದ ಗೋಳು

ಮಣ್ಣೆ ರಾಜು
Published 30 ಜುಲೈ 2025, 0:13 IST
Last Updated 30 ಜುಲೈ 2025, 0:13 IST
<div class="paragraphs"><p>ಚುರುಮುರಿ: ಗೊಬ್ಬರದ ಗೋಳು.</p></div>

ಚುರುಮುರಿ: ಗೊಬ್ಬರದ ಗೋಳು.

   

ರಸಗೊಬ್ಬರ ಸಿಗದೆ ಚಟ್ನಿಹಳ್ಳಿ ರೈತರು ಕಂಗಾಲಾಗಿ ಕುಳಿತಿದ್ದರು.

‘ಗೊಬ್ಬರದ ಗೋಳು ಮುಗಿತೇನ್ರಲಾ?...’ ತಿಮ್ಮಜ್ಜ ಕೋಲೂರಿಕೊಂಡು ಬಂದ.

ADVERTISEMENT

‘ಇಲ್ಲಜ್ಜ, ಕೇಂದ್ರ, ರಾಜ್ಯದವರು ಒಬ್ಬರ ಮೇಲೊಬ್ಬರು ಗೊಬ್ಬರ ಎರಚಾಡಿಕೊಳ್ತಿದ್ದಾರೆ’ ಅಂದ ಶಿವಲಿಂಗ.

ಕೆಂಪೀರ ರಗ್ಗು ಹೊದ್ದುಕೊಂಡು ಬಂದ. ‘ಯಾಕಲಾ ಜೂಗುರುಸ್ತಿದ್ದಿ?’ ತಿಮ್ಮಜ್ಜ ಕೇಳಿದ.

‘ಜ್ವರ ಕಣಜ್ಜಾ, ಅಹ್ಹಾಹ್ಹಾ...’ ಗಡಗಡ ನಡುಗಿದ.

‘ಸೀಮೆಗೊಬ್ಬರ ಹಾಕಿ ಬೆಳೆದ ಊಟ ತಿಂದರೆ ಇಲ್ಲದ ಕಾಯಿಲೆ ವಕ್ಕರಿಸಿಕೊಳ್ತವೆ. ಯಾರ ತಿಪ್ಪೆಯಲ್ಲೂ ಮೂರು ಮಂಕರಿ ಗೊಬ್ಬರ ಇಲ್ಲ. ನಿಮ್ಮ ವಯಸ್ಸಿನಲ್ಲಿ ನಾನು ಕೊಟ್ಟಿಗೆ ಗೊಬ್ಬರದ ಜೊತೆಗೆ ಸೊಪ್ಪು–ಸೆದೆ ಸೇರಿಸಿ ತಿಪ್ಪೆಯಲ್ಲಿ ಬಣವೆ ಗಾತ್ರದ ಗೊಬ್ಬರದ ಗುಡ್ಡೆ ಮಾಡ್ತಿದ್ದೆ’ ತಿಮ್ಮಜ್ಜ ಕೊಚ್ಚಿಕೊಂಡ.

‘ನಿಮ್ಮ ಕಾಲದಲ್ಲಿ ಮನೆ ತುಂಬಾ ಮಕ್ಕಳು, ಕೊಟ್ಟಿಗೆ ತುಂಬಾ ದನಕರು ಇರ್ತಿದ್ವು. ಈಗ ಆರತಿಗೊಂದು, ಕೀರುತಿಗೊಂದು ಮಕ್ಕಳು, ಡೇರಿಗೆ ಹಾಲು ಹಾಕಲು ಕೊಟ್ಟಿಗೆಗೊಂದು ಹಸು ಅಷ್ಟೇ. ಕಾಸು ಕೊಟ್ಟರೂ
ಕೊಟ್ಟಿಗೆ ಗೊಬ್ಬರ ಸಿಗ್ತಿಲ್ಲ’ ಮಲ್ಲಪ್ಪ ಇರೋ ವಿಚಾರ ಹೇಳಿದ.

‘ವ್ಯವಸಾಯವ ಸುಲಭ ಮಾಡಿಕೊಂಡಿದ್ದೀರಿ. ಟ್ರ್ಯಾಕ್ಟರ್‌ನಲ್ಲಿ ನೆಲ ಕೆರೆದು, ಬೀಜ ಉದುರಿಸಿ, ಸೀಮೆಗೊಬ್ಬರ ಎರಚಿ ಬಂದರೆ ಮುಗಿದೋಯ್ತು, ಉಗುರುಕಣ್ಣು ಮಣ್ಣಾಗಲ್ಲ...’

‘ಮನೆ ತುಂಬಾ ಜನ ಇದ್ರೇನೇ ವ್ಯವಸಾಯ. ಕಾಲೇಜು ಕಲಿಯಲು ಪಟ್ಟಣಕ್ಕೆ ಹೋಗುವ ಮಕ್ಕಳು ವಾಪಸ್ ವ್ಯವಸಾಯಕ್ಕೆ ಬರೋದಿಲ್ಲ. ನೇಗಿಲಿಗೆ ಎತ್ತು ಹೂಡಿ ದಿನವೆಲ್ಲಾ ಹೊಲ ಉಳುವ ಕಾಲವಲ್ಲ ಇದು. ವ್ಯವಸಾಯದ ಕಲ್ಚರ್, ಟೇಸ್ಟ್ ಬದಲಾಗಿದೆ. ಮಕ್ಕಳು ಜಂಕ್‌ಫುಡ್‌ಗೆ ಆಸೆ ಪಡುವಂತೆ ನಮ್ಮ ಜಮೀನುಗಳೂ ರಸಗೊಬ್ಬರದ ರುಚಿ ಕೇಳುತ್ತಿವೆ!’ ಅಂದ ಸಿದ್ಧಲಿಂಗ.

‘ಮಕ್ಕಳನ್ನೂ ಕೆಡಿಸಿ, ಭೂಮಿಯನ್ನೂ ಕುಲಗೆಡಿಸಿದ್ದೀರಿ, ಏನಾದ್ರೂ ಮಾಡಿಕೊಳ್ರೀ...’ ಎಂದು ರೇಗಿ ತಿಮ್ಮಜ್ಜ ಹೊರಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.