ADVERTISEMENT

ಚುರುಮುರಿ: ಗಾಂಧಿ ಗಾಯಬ್! 

ಮಣ್ಣೆ ರಾಜು
Published 23 ಡಿಸೆಂಬರ್ 2025, 23:30 IST
Last Updated 23 ಡಿಸೆಂಬರ್ 2025, 23:30 IST
   

‘ರೀ, ಸ್ಕೂಲ್ ಡೇಗೆ ಮಗನಿಗೆ ಗಾಂಧಿ ವೇಷ ಹಾಕಬೇಕು, ಕಾಸ್ಟೂಮ್ಸ್ ತನ್ನಿ’ ಅಂದಳು ಸುಮಿ.

‘ಗಾಂಧಿಗೆ ಕಿರೀಟ, ಗದೆ, ಕತ್ತಿ- ಗುರಾಣಿ, ಬಿಲ್ಲು- ಬಾಣ ಬೇಕಾಗಿಲ್ಲ, ಕಚ್ಚೆ ಉಡಿಸಿ, ವಸ್ತ್ರ ಹೊದಿಸಿ, ಕೈಗೊಂದು ಕೋಲು ಕೊಟ್ಟರೆ ಸಾಕು’ ಎಂದ ಶಂಕ್ರಿ.

‘ನಿಮಗೆಲ್ಲಾ ಗಾಂಧೀಜಿ ಸಸ್ತಾ, ಸದರ, ಸರಳ ಆಗಿಬಿಟ್ಟಿದ್ದಾರೆ ಕಣ್ರೀ’ ಸುಮಿಗೆ ಸಿಟ್ಟು.

ADVERTISEMENT

‘ನಮಗೇ ಅಲ್ಲ, ರಾಜಕೀಯ ಪಕ್ಷಗಳು ಗಾಂಧಿಯನ್ನು ಇನ್ನೂ ಸಸ್ತಾ ಮಾಡಿಕೊಂಡುಬಿಟ್ಟಿವೆ. ಮುಂದಿನ ದಿನಗಳಲ್ಲಿ ಗಾಂಧಿ ಬ್ರ್ಯಾಂಡಿನ ಸರ್ಕಾರಿ ಯೋಜನೆಗಳ ಹೆಸರು ಬದಲಾಗಬಹುದು’.

‘ಗಾಂಧಿ ಬಗ್ಗೆ ದ್ವೇಷಭಕ್ತಿ ಹರಡುವವರು ಹೆಚ್ಚಾಗುತ್ತಿದ್ದರೆ ಇನ್ನೇನಾಗುತ್ತೆ...’

‘ಕೆಲವರಿಗೆ ಗಾಂಧಿ ತತ್ತ್ವ, ಸತ್ವ ಸಪ್ಪೆ ಎನಿಸಿದೆಯಂತೆ. ಅಭಿರುಚಿ ಬದಲಾಯಿಸುವ ಪ್ರಯತ್ನ ನಡೆದಿದೆ. ಮುಂದೆ ಗಾಂಧಿ ರಸ್ತೆ, ಗಾಂಧಿ ವೃತ್ತ, ಗಾಂಧಿ ಮಂದಿರ, ಗಾಂಧಿ ನಗರದ ಹೆಸರುಗಳೂ ಬದಲಾಗಬಹುದು, ನೆಲೆನಿಂತಿರುವ ಗಾಂಧಿ ಪುತ್ಥಳಿಗಳೂ‌ ಪಲಾಯನ ಆಗಿಬಿಡಬಹುದು!’

‘ಏನೇ ಬದಲಾದರೂ ರೂಪಾಯಿ ನೋಟಿನಲ್ಲಿರುವ ಗಾಂಧಿ ಫೋಟೊ ಬದಲಾಗದು, ಗಾಂಧಿ ನೋಟು ಎಲ್ಲರಿಗೂ ಬೇಕು’.

‘ನೋಟು ಎಲ್ಲರಿಗೂ ಬೇಕು, ನೋಟಿನೊಳಗಿನ ಗಾಂಧಿ ಬೇಕಾಗಿಲ್ಲ, ಗಾಂಧಿ ಬದಲಾವಣೆ ಪರ್ವ ಮುಂದುವರಿದರೆ ನೋಟಿನ ಗಾಂಧಿ ಫೋಟೊವೂ ಬದಲಾಗಬಹುದು. ಸಂಪೂರ್ಣ ಡಿಜಿಟಲ್ ಪೇಮೆಂಟ್‌ ವ್ಯವಹಾರ ಶುರುವಾದರೆ ನೋಟೂ ಇಲ್ಲ, ಗಾಂಧಿಯೂ ಇಲ್ಲ!’

‘ಇತಿಹಾಸ ತಿರುಚುವ, ಪರಚುವ ಪ್ರಯತ್ನವಾದರೆ ಮಕ್ಕಳ ಇತಿಹಾಸ ಪಠ್ಯದಿಂದಲೂ ಗಾಂಧಿ ಗಾಯಬ್ ಆಗಬಹುದಲ್ವಾ?!’

‘ಆಗಬಹುದು. ಸರ್ಕಾರಿ ಸಿಲೆಬಸ್‌ನಿಂದಲೂ ಗಾಂಧಿ ಕಣ್ಮರೆಯಾದರೆ ಗಾಂಧಿ ಜಯಂತಿ, ಹುತಾತ್ಮರ ದಿನಾಚರಣೆಗಳು ನಿಂತುಹೋದರೂ ಆಶ್ವರ್ಯವಿಲ್ಲ. ಗಾಂಧಿ ಭಕ್ತರು ಪಿತೃಪಕ್ಷದಲ್ಲಿ ರಾಷ್ಟ್ರಪಿತನ ಫೋಟೊ ಮುಂದೆ ಎಡೆ ಇಟ್ಟು ಮನೆಮಟ್ಟಿಗೆ ಗಾಂಧಿ ಹಬ್ಬ ಆಚರಿಸಿಕೊಳ್ಳಬಹುದು!’ ಎಂದ ಶಂಕ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.