ADVERTISEMENT

ಚುರುಮುರಿ: ಮೇಕೆ ಪಾದಯಾತ್ರೆ!

ಬಿ.ಎನ್.ಮಲ್ಲೇಶ್
Published 14 ಜನವರಿ 2022, 19:30 IST
Last Updated 14 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಟ್ಟಿಗೆಯಲ್ಲಿ ಕುರಿ, ಟಗರು, ಹೋತ ಎಲ್ಲ ಸೇರಿ ಮೇಕೆಯನ್ನು ಕಟಕಟೆಯಲ್ಲಿ ನಿಲ್ಲಿಸಿದ್ದವು.

‘ಏನಲೆ, ದಿನಬೆಳಗಾದ್ರೆ ಟಿ.ವಿ., ಪೇಪರ್ ತುಂಬ ಬರೀ ನಿಂದೇ ಸುದ್ದಿ... ಮೇಕೆದಾಟು, ಮೇಕೆದಾಟು. ಅದೆಲ್ಲಿ ಏನು ದಾಟಿ ಬಂದಿದ್ದಿ ಬೊಗಳು’ ಎಂದಿತು ಟಗರು.

‘ಕಂಡ ಕಂಡ ಸೊಪ್ಪೆಲ್ಲ ತಿನ್ನಾಕೆ ಹೋಗ್ತಾನೆ. ಎಲ್ಲೋ ಏನೋ ದಾಟಿ ಬಂದಿರಬೇಕು. ಇಲ್ಲಾಂದ್ರೆ ಅಟಾಕಂದು ಜನ ಯಾಕೆ ಸೇರ‍್ತಿದ್ರು?’ ಕುರಿಯೂ ಆಕ್ಷೇಪಿಸಿತು.

ADVERTISEMENT

‘ನಂದೇನೂ ತಪ್ಪಿಲ್ಲ... ನಾನು ತಿಂದ್ರೆ ಬೇಲಿ ಮ್ಯಾಗಿನ ಸೊಪ್ಪು ತಿಂತೀನಿ. ಈ ರಾಜಕಾರಣಿಗಳ ತರ ಸಿಕ್ಕಿದ್ದೆಲ್ಲ ತಿಂತೀನಾ?’ ಮೇಕೆ ಕಣ್ಣೀರು ಹಾಕಿತು.

‘ಲೇಯ್, ಅವರೇನು ಸುಂಸುಮ್ನೆ ಪಾದಯಾತ್ರೆ ಮಾಡ್ತಾರಾ? ತೀರ ಗಂಡಸ್ತನದ ಮಾತಾಡ್ತಾರೆ ಅಂದ್ರೆ ಏನರ್ಥ? ನಿನ್ನಿಂದಲೇ ಅದೆಲ್ಲ ಆಗಿರೋದು’ ಹೋತ ನೇರ ಆರೋಪ ಮಾಡಿತು.

‘ನಂಗೇನೂ ಗೊತ್ತಿಲ್ಲ, ನಂಗೂ ಅದ್ಕೂ ಸಂಬಂಧ ಇಲ್ಲ’ ಮೇಕೆ ವಾದಿಸಿತು.

ಅಷ್ಟರಲ್ಲಿ ಕೊಟ್ಟಿಗೆಯಲ್ಲಿದ್ದ ಹಸುವೊಂದು ‘ಲೇಯ್ ತೆಪರಗಳಾ... ಮೇಕೆದಾಟು ಅಂದ್ರೆ ಅದು ಮೇಕೆ ದಾಟಿದ್ದಲ್ಲ. ಅದರ ಹೆಸರಲ್ಲಿ ಜನರಿಗೆ ನೀರು ಕುಡಿಸೋದು. ಮುಂದೆ ಎಲೆಕ್ಷನ್ ಬಂದಾಗ ಮುಖ್ಯಮಂತ್ರಿ ಆಗೋದು...’

‘ಅಲ್ಲ ಜನರಿಗೆ ಗುಂಡು ಕೊಡಿಸಿ ಎಲೆಕ್ಷನ್ ಗೆಲ್ಲೋದು ಕೇಳಿದೀನಿ. ನೀರು ಕುಡಿಸಿದ್ರೆ ಜನ ವೋಟು ಹಾಕ್ತಾರಾ?’ ಹೋತಕ್ಕೆ ಅನುಮಾನ.

‘ಮತ್ತೆ ಇವರು ಪಾದಯಾತ್ರೆ ಮಾಡಿದ್ರೆ ಅವರು ನಿಲ್ಲಿಸ್ತಾರಲ್ಲ ಯಾಕೆ? ಮುಖ್ಯಮಂತ್ರಿ ಆಗೋದನ್ನ ತಡೆಯೋಕಾ?’ ಕುರಿ ಕೇಳಿತು.

‘ಹ್ಞುಂ ಮತ್ತೆ, ರಾಜಕೀಯ ಅಂದ್ರೆ ಅದೇ’ ಹಸು ತಲೆಯಾಡಿಸಿತು.

‘ಹಂಗಾದ್ರೆ ನಾನೂ ಪಾದಯಾತ್ರೆ ಮಾಡ್ತೀನಿ’ ಮೇಕೆ ಹೇಳಿದಾಗ ಎಲ್ಲರಿಗೂ ಆಶ್ಚರ್ಯ.

‘ಏನು? ನೀನೂ ಪಾದಯಾತ್ರೆ ಮಾಡ್ತೀಯ? ಯಾಕೆ?’

‘ನನ್ನ ಹೆಸರಲ್ಲಿ ಪಾದಯಾತ್ರೆ ಮಾಡೋರು ಮುಖ್ಯಮಂತ್ರಿ ಆಗೋದಾದ್ರೆ ನಾನೇ ಪಾದಯಾತ್ರೆ ಮಾಡಿ ನಾನೇ ಮುಖ್ಯಮಂತ್ರಿ ಆಗಬಹುದಲ್ವಾ?’

ಮೇಕೆ ತರ್ಕಕ್ಕೆ ಯಾರಿಗೂ ಮಾತೇ ಹೊರಡಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.