ADVERTISEMENT

ಹಾರೋ ಕುದುರೆಗಳು!

ಬಿ.ಎನ್.ಮಲ್ಲೇಶ್
Published 10 ಜುಲೈ 2019, 19:45 IST
Last Updated 10 ಜುಲೈ 2019, 19:45 IST
.
.   

ಪತ್ರಕರ್ತ ತೆಪರೇಸಿಗೆ ಸಂಪಾದಕರಿಂದ ತುರ್ತು ಬುಲಾವ್ ಬಂತು. ‘ರೀ ತೆಪರೇಸಿ, ನೋಡ್ರಿ ಅಲ್ಲಿ, ವಿಧಾನಸೌಧದಿಂದ ‘ಕುದುರೆ’ಗಳು ­ಹೆಂಗೆ ಹಾರ್ತಾ ಇದಾವೆ. ಹೋಗ್ರಿ, ಬೆನ್ಹತ್ತಿ ಹಿಡೀರಿ, ಒಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಕೊಡ್ರಿ’ ಎಂದರು ಸಂಪಾದಕರು.

ತೆಪರೇಸಿ ನಕ್ಕ. ‘ಸಾರ್, ಹಾರೋ ಕುದುರೆ­ಗಳನ್ನ ಹೆಂಗೆ ಹಿಡೀಲಿ? ಮೊನ್ನೆ ಮುಂಬೈ, ನೆನ್ನೆ ಪೂನಾ, ಇವತ್ತು ಗೋವಾ. ನಾಳೆ ಎಲ್ಲಿಗೆ ಹಾರ್ತಾವೋ ಗೊತ್ತಿಲ್ಲ. ಬೇಂದ್ರೆ ಅಜ್ಜ ‘ಹಕ್ಕಿ ಹಾರುತಿದೆ ನೋಡಿದಿರಾ?’ ಅಂತ ಪದ್ಯ ಬರೆದಿದ್ರು. ಈಗ ಕುದುರೆಗಳೂ ಹಾರೋ ಕಾಲ ಬಂತಲ್ಲ ಸಾ...’

‘ನಿಮ್ ತಲೆ, ಅವನ್ನ ಹಿಡೀಬೇಕು ಕಣ್ರೀ.ಎಲ್ಲರಿ­ಗಿಂತ ಮೊದ್ಲು ಹಿಡಿದು ನಮ್ ಚಾನೆಲ್‌ನಲ್ಲಿ ನ್ಯೂಸ್ ಬ್ರೇಕ್ ಮಾಡಬೇಕು. ನಿಮಗೆ ಇದು ಆಗಲ್ಲ ಅನ್ಸುತ್ತೆ, ಹೋಗ್ಲಿ ಆ ಗಾಂಧಿ ಪ್ರತಿಮೆ ಮುಂದೆ ಮೊನ್ನೆ ಕಾಂಗ್ರೆಸ್‌ನೋರು, ನಿನ್ನೆ ಬಿಜೆಪಿಯೋರು ಧರಣಿ ಮಾಡಿ­ದ್ರಂತೆ. ಗಾಂಧಿ ತಾತ ಅವರಿಗೆಲ್ಲ ಏನು ಹೇಳಿ ಕಳಿಸಿದ್ರು ಕೇಳ್ಕೊಂಡ್ ಬನ್ನಿ’ ಎಂದರು ಸಂಪಾದಕರು.

ADVERTISEMENT

ತೆಪರೇಸಿ ಗಾಂಧಿ ಪ್ರತಿಮೆ ಮುಂದೆ ಪ್ರತ್ಯಕ್ಷನಾಗಿ ಗಾಂಧಿ ತಾತನನ್ನೇ ದಿಟ್ಟಿಸಿ ನೋಡಿದ.

‘ಏನಯ್ಯ ನನ್ನ ಹಾಗೆ ಗುರಾಯಿಸ್ತಿದ್ದೀ?’ ಪ್ರತಿಮೆ ಮಾತಾಡಿತು.

‘ಏನಿಲ್ಲ, ನಿನ್ನ ಮುಂದೆ ಯಾರು ಬಂದು ಸತ್ಯಾಗ್ರಹ ಮಾಡಿದ್ರೂ ತೆಪ್ಪಗೆ ಕೂತಿರ್ತೀಯಲ್ಲ, ಬುದ್ಧಿ ಹೇಳೋಕೆ ಆಗಲ್ವ?’ ತೆಪರೇಸಿ ಕೇಳಿದ.

‘ನೀನೊಳ್ಳೆ, ಬುದ್ಧಿ ಹೇಳೋ ಕಾಲ ಹೋಯ್ತಪ್ಪ, ನಾನೀಗ ಯಾರ ತಂಟೆಗೂ ಹೋಗ್ತಿಲ್ಲ.’

‘ಹೋಗ್ಲಿ, ಮೊನ್ನೆ ಕಾಂಗ್ರೆಸ್‍ನೋರು ಬಂದು ನಿನ್ನ ಮುಂದೆ ಸತ್ಯಾಗ್ರಹ ಮಾಡಿದ್ರಲ್ಲ ನೋಡಲಿಲ್ವ?’

‘ನಾನಾಗ ಕಣ್ಣು ಮುಚ್ಕೊಂಡಿದ್ದೆ’.

‘ಬಿಜೆಪಿಯೋರು ಧಿಕ್ಕಾರ ಕೂಗಿದಾಗ?’

‘ಆಗ ಕಿವಿ ಮುಚ್ಕೊಂಡಿದ್ದೆ’.

‘ಮತ್ತೀಗ ಮಾತಾಡ್ತಿದೀಯ? ಬಾಯಿ ಮುಚ್ಕೋಬೇಕಿತ್ತು?’

‘ನೀವು ಮೊದಲೇ ಬ್ರೇಕಿಂಗ್ ನ್ಯೂಸ್‍ನೋರು. ನಾನು ಮಾತಾಡದಿದ್ರೆ ನೀವು ಏನೇನೋ ಕಲ್ಪಿಸಿಕೊಂಡು ಸುದ್ದಿ ಮಾಡಿಬಿಡ್ತೀರಿ. ಅದ್ಕೇ ಮಾತಾಡ್ತಿದೀನಿ’.

ಗಾಂಧಿ ತಾತನ ಮಾತು ಕೇಳಿ ತೆಪರೇಸಿ ಫಕ್ಕನೆ ಕಣ್ಣುಬಿಟ್ಟ. ಕನಸು ಹಾರಿ ಹೋಗಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.