ಚುರುಮುರಿ: ಹೃದಯದ ಮಾತು
ಮೈಮರೆತು ಮಲಗಿದ್ದ ಶಂಕ್ರಿಯನ್ನು ತಟ್ಟಿ ಎಬ್ಬಿಸಿದ ಹೃದಯ, ‘ಎದ್ದೇಳು, ವಾಕಿಂಗ್ ಮಾಡು ಹೋಗು’ ಎಂದಿತು.
‘ಮೂಡ್ ಇಲ್ಲ’ ಮಗ್ಗುಲಾದ.
‘ನಾನು ನಿನ್ನ ಹೃದಯ, ನಿನ್ನ ಜೀವದ ಗೆಳೆಯ. ನನ್ನ ಬಗ್ಗೆ ನಿನಗೆ ಕಾಳಜಿಯಿಲ್ಲ. ಪೇಪರ್ ಓದಿದ್ದೀಯಾ, ಹೃದಯಾಘಾತ ಹೆಚ್ಚಾಗುತ್ತಿವೆಯಂತೆ’ ಕಳವಳಗೊಂಡಿತು.
‘ಆಗೋದನ್ನು ತಪ್ಪಿಸಲಾಗೊಲ್ಲ’.
‘ಡ್ರೆಸ್ ಕೊಡಿಸು, ಬೈಕ್ ಕೊಡಿಸು ಎಂದು ಮಕ್ಕಳು ಹಟ ಮಾಡುವಂತೆ ನಾನು ನಿನ್ನನ್ನು ಯಾವತ್ತಾದ್ರೂ ಏನನ್ನಾದರೂ ಕೇಳಿದ್ದೀನಾ?’
‘ಸರಿ, ನಿನಗೇನು ಬೇಕು?’
‘ನೀನು ನಾಯಿ ಸಾಕಬೇಕು’.
‘ರೇಷನ್ ಕಾರ್ಡಿನಲ್ಲಿ ಹೆಸರಿರುವ ಹೆಂಡ್ತಿ, ಮಕ್ಕಳನ್ನೇ ಸಾಕಲು ಒದ್ದಾಡ್ತಿದ್ದೀನಿ. ಅನ್ನಭಾಗ್ಯವಿಲ್ಲದ ನಾಯಿ ಸಾಕಾಣಿಕೆ ಲಾಭದಾಯಕ ಅಲ್ಲ. ಕುರಿ, ಕೋಳಿ, ಹಸು ಸಾಕು ಅಂತ ಬೇಕಾದ್ರೆ ಹೇಳು’.
‘ನಾಯಿ ನಿನಗೆ ಆರೋಗ್ಯದ ದಾರಿ ತೋರಿಸುತ್ತದೆ. ಅದನ್ನು ನಿತ್ಯ ಹೊರಗೆ ಕರೆದುಕೊಂಡು ಹೋಗಬೇಕು. ನಾಯಿ ನೆಪದಲ್ಲಿ ನೀನೂ ವಾಕಿಂಗ್ ಮಾಡಿದಂತಾಗುತ್ತದೆ. ಹಾಗೇ ಯೋಗ, ವ್ಯಾಯಾಮ ಮಾಡು’.
‘ತಲೆ ತಿನ್ನಬೇಡ, ನಿದ್ರೆ ಬರ್ತಿದೆ ಸುಮ್ನಿರು’.
‘ಸುಮ್ಮನಿರಕ್ಕಾಗಲ್ಲ, ನಿನ್ನ ರಕ್ತದ ಒತ್ತಡ ಏರುಪೇರಾಗಿದೆ. ಕೊಲೆಸ್ಟ್ರಾಲ್ ಹೆಚ್ಚಾಗಿದೆ. ಬೊಜ್ಜು ಬೆಳೆದು ಹೊಟ್ಟೆಯ ಗಾತ್ರ ಜಾಸ್ತಿಯಾಗಿದೆ’.
‘ನನ್ನ ಒಡಹುಟ್ಟಿದ ಹೊಟ್ಟೆ ಮೇಲೆ ಕೆಟ್ಟ ಕಣ್ಣು ಹಾಕಬೇಡ’.
‘ನೀನು ನಕ್ಕು ಎಷ್ಟು ದಿನ ಆಯ್ತು?’
‘ನೆನಪಿಲ್ಲ. ಕಚೇರಿಯ ಒತ್ತಡ, ಸಂಸಾರದ ಜಂಜಾಟದಲ್ಲಿ ನಗಲು ಸಾಧ್ಯವಿಲ್ಲ’.
‘ನಗೆ ಕ್ಲಬ್‌ಗಳಿಗೆ ಸೇರಿಕೊಂಡಾದರೂ ನೀನು ನಗಬೇಕು’.
‘ಹುಚ್ಚುಚ್ಚಾಗಿ ನಕ್ಕರೆ ನೋಡಿದ ಜನ ನಗ್ತಾರೆ... ಕಾಡಬೇಡ, ಮಲಗಲು ಬಿಡು, ನೀನೂ ಮಲಗಿ ನಿದ್ರೆ ಮಾಡು...’
‘ನಾನು ಮಲಗಿಬಿಟ್ಟರೆ ನೀನು ಮತ್ತೆ ಎದ್ದೇಳಲು ಸಾಧ್ಯವಿಲ್ಲ!’ ಎಚ್ಚರಿಸಿತು ಹೃದಯ.
ಗಾಬರಿಯಾದ ಶಂಕ್ರಿ ನಿದ್ರೆಯಿಂದ ಎಚ್ಚರಗೊಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.