ADVERTISEMENT

ಚುರುಮುರಿ: ಸಂಬಳದ ಜೋಕು!

ಗುರು ಪಿ.ಎಸ್‌
Published 9 ಏಪ್ರಿಲ್ 2025, 23:30 IST
Last Updated 9 ಏಪ್ರಿಲ್ 2025, 23:30 IST
   

‘ಬಿತ್ತು ಬಿತ್ತು ಬಿತ್ತು, ಬಿದ್ದೇ ಬಿಡ್ತು...’ ಆತಂಕದಿಂದ ಕೂಗಿದೆ. ದಡಬಡನೆ ಓಡಿಬಂದ ಹೆಂಡತಿ, ‘ಏನು ಬಿತ್ತು ರೀ’ ಎಂದಳು.

‘ಷೇರ್ ಮಾರ್ಕೆಟ್ ಬಿತ್ತು ಕಣೆ, ಮಹಾಪತನ!’

‘ಏನ್ ಬಿಲ್ ಗೇಟ್ಸ್ ಮೊಮ್ಮಗ ಇವ್ರು, ಕೋಟಿಗಟ್ಟಲೆ ದುಡ್ಡನ್ನ ಷೇರ್ ಮಾರ್ಕೆಟ್‌ನಲ್ಲಿ ಇನ್ವೆಸ್ಟ್ ಮಾಡಿದಾರೆ... ಅದ್ ಸರಿ, ನೀವೆಷ್ಟು ಹೂಡಿಕೆ ಮಾಡಿದ್ರಿ?’

ADVERTISEMENT

‘ತಿಂಗಳಿಗೆ ಎರಡು ಸಾವಿರಾನ ಮ್ಯೂಚುವಲ್ ಫಂಡ್‌ನಲ್ಲಿ ಹಾಕ್ತಿರೋದು ಗೊತ್ತಿಲ್ವ?’

ಜೋರಾಗಿ ನಕ್ಕ ಹೆಂಡತಿ, ‘ಅಬ್ಬಬ್ಬಾ, ಕ್ರೋರ್ಸ್ ಟುಗೆದರ್ ಇನ್ವೆಸ್ಟ್‌ಮೆಂಟ್‌’ ಎನ್ನುತ್ತಾ, ‘ಇನ್ಮುಂದೆ ಆ ಎರಡು ಸಾವಿರ ರೂಪಾಯಿನೂ ಮರೆತುಬಿಡಿ’.

‘ಯಾಕೆ? ಅದರ ಮೇಲೂ‌ ನಿನ್ನ ಕಣ್ಣು ಬಿತ್ತಾ?’

‘ನನ್ನ ಕಣ್ಣಲ್ಲ ರೀ, ನಿಮ್ಮ ಕಾಂಗ್ರೆಸ್ ಸರ್ಕಾರದ ಕಣ್ಣು ಬಿದ್ದಿದೆ. ಹಾಲು- ಮೊಸರಿನ ರೇಟ್ ಜಾಸ್ತಿ ಮಾಡಿದಾರಲ್ಲ’. Podcast ಚುರುಮುರಿ: ಸಂಬಳದ ಜೋಕು!

‘ಹಾಗಾದರೆ, ನಿಮ್ ಬಿಜೆಪಿ ಸರ್ಕಾರದವರು ಮಾಡಿರೋ ಘನಕಾರ್ಯಕ್ಕೆ ನನ್ ಸ್ಯಾಲರಿಯೇ ತೆಗೆದಿಡಬೇಕು ಅನಿಸುತ್ತೆ’.

‘ಗ್ಯಾಸ್ ಸಿಲಿಂಡರ್‌ಗೆ ಏನ್ ಒಂದೈವತ್ತು ರೂಪಾಯಿ ಜಾಸ್ತಿ ಮಾಡಿರಬಹುದಷ್ಟೇ, ಅದೇನ್ ದೊಡ್ಡ ಹೊರೆ ಅಲ್ಲ ಬಿಡಿ’ ಸಮರ್ಥಿಸಿಕೊಳ್ಳುವಂತೆ ಹೇಳಿದಳು.

‘ನಾವು ಹೀಗಿರೋದಕ್ಕೇ ನಮ್ ಲೈಫ್ ಕಷ್ಟ ಆಗ್ತಿರೋದು’.

‘ಅಂದ್ರೆ, ಏನ್ರೀ‌ ನಿಮ್‌ ಮಾತಿನ ಅರ್ಥ?’

‘ಅಂದ್ರೆ, ನಾವು ಕಾಂಗ್ರೆಸ್‌ನ ಸಪೋರ್ಟ್ ಮಾಡಲಿ, ಬಿಜೆಪಿಯನ್ನ ಬೆಂಬಲಿಸಲಿ, ನಾವು ಹಿಂದೂ ಆಗಿರಲಿ, ಮುಸ್ಲಿಂ ಆಗಿರಲಿ, ಎಲ್ಲರಿಗೂ ಬೆಲೆ ಏರಿಕೆ ಬಿಸಿ ಸಮಾನವಾಗಿ ತಟ್ಟುತ್ತೆ’.

‘ಅಬ್ಬಬ್ಬಾ, ಏನ್ ಹೊಸ ವಿಷಯ ಹೇಳಿದ್ರಿ, ಜೋಕ್ ಮಾಡೋದನ್ನ ನಿಲ್ಸಿ ಸಾಕು’ ಎಂದು ವ್ಯಂಗ್ಯ ಮಾಡುತ್ತಾ, ‘ಅದ್ ಸರಿ, ಎಲ್ಲದರ ಬೆಲೆ ಜಾಸ್ತಿ ಆಗಿರೋದ್ರಿಂದ ನಿಮ್ ಸ್ಯಾಲರಿನೂ ಜಾಸ್ತಿ ‌ಮಾಡ್ತಾರಾ’ ಎಂದಳು.

‘ಈಗ ನೀನು‌ ಜೋಕ್ ಮಾಡೋದನ್ನ ನಿಲ್ಸು ಸಾಕು’ ಎಂದು ಹೊರ ನಡೆದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.