ADVERTISEMENT

ಹೇಳ್ದೆ ರದ್ದಾಯ್ತಾ ವಿಶೇಷಾಧಿಕಾರ?

ಗುರು ಪಿ.ಎಸ್‌
Published 8 ಆಗಸ್ಟ್ 2019, 18:30 IST
Last Updated 8 ಆಗಸ್ಟ್ 2019, 18:30 IST
   

‘ಏನ್ರೀ, ರಾತ್ರಿ ನಿದ್ದೆಯಲ್ಲಿ ಒಬ್ಬರೇ ನಗ್ತಿದ್ರಿ, ಅಳ್ತಿದ್ರಿ, ಆಗಾಗ ಚಪ್ಪಾಳೆ ಬೇರೆ ತಟ್ತಿದ್ರಿ... ಹುಚ್ಚು ಹಿಡಿದಿತ್ತಾ’ ವ್ಯಂಗ್ಯವಾಗಿ ಕೇಳಿದಳು ಹೆಂಡ್ತಿ.

‘ನಿನ್ನೆ ಬೆಳಿಗ್ಗೆಯಿಂದ ಮನಸಲ್ಲಿ ಏನು ಅಂದ್ಕೊಳ್ತಿದ್ನೊ ಅದೇ ಕನಸಲ್ಲಿ ಬಂದಿತ್ತು. ಕಾಶ್ಮೀರದಲ್ಲಿ 60x40 ಸೈಟ್ ತಗೊಂಡಿದ್ದೆ. ಐದು ಎಕರೆ ಸೇಬಿನ ತೋಟ ಖರೀದಿಸಿದ್ದೆ. ಕನಸಲ್ಲಿ ಅಳ್ತಿರ್‍ಲಿಲ್ಲ, ಅದು ಆನಂದಭಾಷ್ಪ. ಕಾಶ್ಮೀರಿ ಹುಡುಗೀರು ನನ್ನ ಮದುವೆ ಆಗೋಕೆ ಕ್ಯೂನಲ್ಲಿ ನಿಂತಿದ್ರು. ಅದ್ಕೆ ಖುಷಿಯಾಗಿ ಚಪ್ಪಾಳೆ ತಟ್ತಿದ್ದೆ’ ಪತ್ನಿ ಪಿತ್ತ ನೆತ್ತಿಗೇರಲಿ ಎಂಬ ಹಿಡನ್ ಅಜೆಂಡಾ ಇಟ್ಟುಕೊಂಡೇ ಉತ್ತರಿಸಿದೆ.

ತೀರಾ ನಿಕೃಷ್ಟವಾಗಿ ಮೇಲಿನಿಂದ ಕೆಳಗಿನವರೆಗೆ ನೋಡಿ ನಕ್ಕ ಹೆಂಡ್ತಿ, ‘ಮೊದಲು ಮನೆ ಬಾಡಿಗೆ ಕಟ್ಟಿ. ತೋಟ ತಗೊಳೋದಿರಲಿ, ಮಕ್ಕಳಿಗೆ ಎರಡು ಕೆ.ಜಿ ಸೇಬು ತಂದ್ಕೊಡಿ ಸಾಕು. ಇನ್ನು, ನಿಮ್ಮನ್ನ ಕಟ್ಟಿಕೊಳ್ಳೋ ದುರ್ಗತಿ ಕಾಶ್ಮೀರಿ ಹುಡುಗಿಯರಿಗೆ ಬಂದಿಲ್ಲ ಬಿಡಿ’ ಕಾಲೆಳೆದಳು.

ADVERTISEMENT

‘ನಿನ್ನ ಮದುವೆಯಾದ ಕ್ಷಣದಿಂದಲೇ ನನ್ನ ವಿಶೇಷಾಧಿಕಾರ ರದ್ದಾಯಿತು. ಕನಸು ಕಾಣೋ ಸ್ವಾತಂತ್ರ್ಯವೂ ನಂಗಿಲ್ಲವಾ?’ ಅಲವತ್ತುಕೊಂಡೆ.

‘ನೋಡ್ರಿ, ಕೆಲವು ವಿಶೇಷಾಧಿಕಾರಗಳನ್ನ ಹೇಳಿ ರದ್ದು ಮಾಡ್ತಾರೆ... ಕೆಲವು ಹೇಳ್ದೆ ರದ್ದಾಗಿರ್ತವೆ... ಏನೇ ಆದರೂ ವಿಕ್ಟರಿ ಸಿಂಬಲ್ ತೋರಿಸ್ತಾ, ನಗ್ತಾ ಓಡಾಡಬೇಕು... ಅದು ಕಾನ್ಫಿಡೆನ್ಸ್’ ನನ್ನ ಹೆಗಲ ಮೇಲೆ ಬಂದೂಕಿಟ್ಟು ಯಾರಿಗೋ ಗುಂಡು ಹಾರಿಸಿದ್ಲು ಅರ್ಧಾಂಗಿ.

‘ಹೇಳ್ದೆ ರದ್ದು ಮಾಡೋ ವಿಶೇಷಾಧಿಕಾರವಾ? ಹೆಂಗೆ’ ತಲೆ ಕೆರೆದುಕೊಂಡೆ.

‘ಸಿ.ಎಂ ಆಗಿ 13 ದಿನಗಳಾದ್ರೂ ಸಂಪುಟ ವಿಸ್ತರಣೆ ಮಾಡೋ ವಿಶೇಷಾಧಿಕಾರ ಇಲ್ದೆ ಒದ್ದಾಡ್ತಿಲ್ವ, ಹಂಗೆ’ ಎಂದು ಹೇಳುತ್ತಾ ‘ಕಮಲಿ’ ಸೀರಿಯಲ್ ನೋಡತೊಡಗಿದಳು ಯಜಮಾನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.