
ಚುರುಮುರಿ
‘ಈ ಬಾರಿಯಾದರೂ ನಮ್ಮ ಈರಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕಿತ್ತು…’ ಬೈಟು ಬಳಗದಲ್ಲಿ ಬದ್ರಿ ಅನುಕಂಪ ಸೂಚಿಸಿದ.
‘ಪಾಪ, ಮಂತ್ರಿಯ ಡ್ರೈವರ್‌ನಿಂದ ಮುಖ್ಯಮಂತ್ರಿ ಅಡ್ವೈಸರ್‌ವರೆಗೆ ವಶೀಲಿ ಹಚ್ಚಿದರೂ ಕನ್ನಡಾಂಬೆ ಒಲಿಯಲಿಲ್ಲ’.
‘ಹೌದು, ಆತನ ದೊಡ್ಡಮಟ್ಟದ ಪ್ರಭಾವವೂ ಸಹಾಯಕ್ಕೆ ಬರಲಿಲ್ಲ ನೋಡು…’
‘ಯಾವುದೇ ಪದವಿ, ಪ್ರಶಸ್ತಿ, ಹುದ್ದೆಗೆ ಬೇಕಿರುವುದು ದೊಡ್ಡ ಪ್ರಭಾವ ಅಲ್ಲ, ದೊಡ್ಡ ಹಣೆ’– ಥೇಟ್ ಮಧುಗಿರಿ ರಾಜಣ್ಣ ಥರ ಅದೇನೋ ಹುಳ ಬಿಟ್ಟ ಕೊಟ್ರಿ. ಎಲ್ಲರೂ ಮುಖಮುಖ ನೋಡಿಕೊಂಡರು. ಕೊನೆಗೆ ಕೊಟ್ರಿಯೇ ವಿವರಣೆ ಕೊಟ್ಟ:
‘ದಾನೆ ದಾನೆ ಪೆ ಲಿಖಾ ಹೈ ಖಾನೆ ವಾಲೆ ಕಾ ನಾಮ್ ಅಂತಾರೆ. ಹಾಗೇ ಹಣೆ ಹಣೆ ಮೇಲೆ ಹುದ್ದೆಯ, ಪ್ರಶಸ್ತಿಯ ಹೆಸರು ಬರೆದಿರುತ್ತದೆ’.
‘ದೊಡ್ಡ ಹಣೆಯ ಮೇಲೆ ದೊಡ್ಡಕ್ಷರದಲ್ಲಿ ಬರೆದರಷ್ಟೇ ಸಾಲದು, ಬರಹದ ಭಾಷೆಯೂ ಮುಖ್ಯವಾಗುತ್ತದೆ’.
‘ಬ್ರಹ್ಮ ದೊಡ್ಡ ಹುದ್ದೆಯನ್ನೇ ಬರೆದಿರಬಹುದು, ಕಿತಾಪತಿ ಚಿತ್ರಗುಪ್ತ ಚಿಕ್ಕದಾಗಿ ಓದಿಕೊಂಡರೇ...’
‘ಹಾಗೇ ಆದಂತಿದೆ, ಈರಪ್ಪನ ಹಣೆಯ ಮೇಲೆ ಸಂಸ್ಕೃತದಲ್ಲಿ ಬರೆದ ಪ್ರಶಸ್ತಿ ಹೆಸರು ಓದುವಲ್ಲಿ ಸಂಸ್ಕೃತಿ ಸಚಿವ ತಂಗಡಗಿ ತಡವರಿಸಿದ್ದಾರೆ!’
‘ಅದರಲ್ಲಿ ಅಚ್ಚರಿಯೇನಿಲ್ಲ. ಬಂಡೆಯಣ್ಣನ ಹಣೆಯ ಮೇಲಿನ ದೆಹಲಿ ಬ್ರಹ್ಮನ ಬರಹ ಹಿಂದಿಯಲ್ಲಿ ಇರೋದೇ ಈಗಿನ ರಾಜಕೀಯ ಫಜೀತಿಗೆ ಕಾರಣ. ಅಪ್ಪಟ ಕನ್ನಡ ಕುವರ ಯತೀಂದ್ರ ಅದನ್ನು ‘ಉಪಮುಖ್ಯಮಂತ್ರಿ’ ಎಂದು ಓದಿಕೊಂಡರೆ, ಮಾಗಡಿ ಬಾಲಕೃಷ್ಣಗೆ ಅದು ‘ಮುಖ್ಯಮಂತ್ರಿ’ ಅಂತ ಕಾಣಿಸುತ್ತಿದೆ’.
‘ಒಕ್ಕೂಟ ವಿರೋಧಿ ಹಿಂದಿ ಹಣೆಬರಹ ಸಾಕು, ಕನ್ನಡ ಹಣೆಬರಹ ಬೇಕು’ ತಿಂಗಳೇಶ ರಾಜ್ಯೋತ್ಸವಕ್ಕೆ ಹೊಸ ಘೋಷಣೆ ಸಿದ್ಧಪಡಿಸಿದ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.