ADVERTISEMENT

ಚುರುಮುರಿ: ಚುನಾವಣಾ ಸೇವೆಗಳು

ಸುಮಂಗಲಾ
Published 5 ಮಾರ್ಚ್ 2023, 19:31 IST
Last Updated 5 ಮಾರ್ಚ್ 2023, 19:31 IST
   

‘ನೋಡಿಲ್ಲಿ... ನಮ್ಮ ಕುಮಾರಣ್ಣ 9 ದಿನದ್ದು ದಿಗ್ವಿಜಯ ಯಾಗ ಮಾಡಾಕ ಹತ್ಯಾನ... ಕೆಸಿಆರ್ ಮಾಮಾ ಇದೇ ಯಾಗ ಮಾಡಿದ್ದಕ್ಕೇ ತೆಲಂಗಾಣ ಮುಖ್ಯಮಂತ್ರಿ ಆದರಂತ. ಈ ಸಲ ಕುಮಾರಣ್ಣನೇ ಮುಖ್ಯಮಂತ್ರಿ ಆಗತಾನ’ ಎಂದು ಬೆಕ್ಕಣ್ಣ ಭಯಂಕರ ಸಂಭ್ರಮದಿಂದ ವದರಿತು.

‘ದಿಗ್ವಿಜಯ ಯಾಗ ಮಾಡಿದವ್ರೆಲ್ಲ ಮುಖ್ಯಮಂತ್ರಿಯಾಗತಾರ ಅಂದ್ರ ನೀನೂ ಒಂದ್ ಯಾಗ ಮಾಡಿ, ಮಂತ್ರಿಯಾಗಲೇ’ ನಾನು ಕಿಚಾಯಿಸಿದೆ.

‘ನನಗ ಅಧಿಕಾರ, ಕುರ್ಚಿ ಹಿಂತಾ ಆಸೆಯಿಲ್ಲ, ಸೇವೆಯೇ ಧ್ಯೇಯ’ ಎಂದು ಪರಮವಿರಾಗಿಯಂತೆ ನುಡಿದ ಬೆಕ್ಕಣ್ಣ ಲ್ಯಾಪ್‌ಟಾಪಿನಲ್ಲಿ ತಲೆ ತೂರಿಸಿತು.

ADVERTISEMENT

ತುಸು ಹೊತ್ತು ಬಿಟ್ಟು, ‘ನಾ ಎರಡು ಮೂರು ಥರಾ ಆನ್‌ಲೈನ್‌ ಪೋರ್ಟಲ್ ಶುರುಮಾಡತೀನಿ. ಇನ್‌ವೆಸ್ಟ್‌ಮೆಂಟ್ ಮಾಡಾಕೆ ರೊಕ್ಕ ಕೊಡು’ ಎಂದು ಬೆಣ್ಣೆ ಹಚ್ಚತೊಡಗಿತು.

‘ನನ್ ಹತ್ರ ನಯಾಪೈಸೆ ಇಲ್ಲ. ನೀಯೇನ್ ಆನ್‌ಲೈನ್ ಕಾರುಬಾರು ಮಾಡಾಂವಾ?’ ಎಂದು ಗದರಿದೆ.

‘ಚುನಾವಣೆ ಹತ್ರ ಬರ್ತಿದ್ದಂಗೆ ಹೆಂಗಿದ್ದರೂ ಎಲ್ಲ ಪಕ್ಷದವ್ರು ಒಂದಲ್ಲ ಒಂದು ಯಾಗ, ಪೂಜೆ ಮಾಡತಾರ. ಹಿಂತಾ ಯಾಗ, ಪೂಜೆ ಪುನಸ್ಕಾರಕ್ಕೆ ಪುರೋಹಿತರು, ಪೂಜಾ ಸಾಮಗ್ರಿ, ದೇವರಿಗೆ ಬೇಡಿಕೆಗಳ ಪಟ್ಟಿ, ಇವನ್ನೆಲ್ಲ ಆನ್‌ಲೈನಿನಾಗೆ ಬುಕ್ ಮಾಡಾಕೆ ಯಾಗ ಪೋರ್ಟಲ್. ರಾಜಕೀಯದವರಿಗೆ ಹೋಮಹವನ ಮಾಡಿಸೋ ರಾಜ ಪುರೋಹಿತರು ಯಾಗ ಪೋರ್ಟಲ್ಲಿನಾಗೆ ಸಿಗತಾರ. ಚುನಾವಣೆ ಪ್ರಚಾರಸಭೆಗಳಿಗೆ ಎಷ್ಟು ಜನರು, ಎಷ್ಟು ಹೊತ್ತು ಬೇಕು ಅಂತ ಬುಕ್ ಮಾಡಾಕೆ ಬಾಡಿಗೆಜನ ಪೋರ್ಟಲ್. ಇಲ್ಲಿ ಬಾಡಿಗೆಜನ ಕಳಿಸೋ ಏಜೆಂಟ್‌ಗಳು ಸಿಗತಾರ. ಪಕ್ಷಗಳಿಗೆ ಬೇಕಾದ ಸ್ಲೋಗನ್ನು, ಬ್ಯಾನರ್‍ರು, ಪೋಸ್ಟರ್‍ರು, ಎದುರು ಪಕ್ಷದವರಿಗೆ ಬೈಗುಳದಂಥವೆಲ್ಲ ಬರೆದುಕೊಡೋವ್ರಿನ್ನ ಬುಕ್ ಮಾಡಾಕೆ ಪ್ರಚಾರ ಪೋರ್ಟಲ್. ಪೋರ್ಟಲ್ ಸೇವೆ ಪಡೆದಿದ್ದಕ್ಕೆ ಎರಡೂ ಕಡೆಯವರು ನನಗ ಚಾರ್ಜ್ ಕೊಡಬೇಕು...’

ಬೆಕ್ಕಣ್ಣ ಚುನಾವಣಾ ಸೇವಾ ಪೋರ್ಟಲ್‌ಗಳಿಂದ ದುಡ್ಡು ಗಳಿಸುವ ದೊಡ್ಡ ಕನಸು ಕಾಣಹತ್ತಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.