ADVERTISEMENT

ಚಿವುಟಿ ಅಳಿಸುವವರು

ಸುಮಂಗಲಾ
Published 5 ಜನವರಿ 2020, 19:45 IST
Last Updated 5 ಜನವರಿ 2020, 19:45 IST
Churumuri- 06-01-2020
Churumuri- 06-01-2020   

ಮನೆಗೆ ಬಂದ ಗೆಳತಿಯ ಮಗಳು ಭಾರಿ ಉಮೇದಿನಲ್ಲಿದ್ದಳು. ‘ಸುದ್ದಿ ಕೇಳೀರಿಲ್ರಿ... ಮಹಾ ಸರ್ಕಾರ ಶಿವಶಿವಾ ಅಂತ ಈಗ ಕೈಹಿಡಿದು ನಡೆಯಾಕ ಹತ್ತಿತ್ತು, ಅಷ್ಟರಾಗೆ ಮಹಾ ವಿಕಾಸ್ ಆಘಾಡಿಯಲ್ಲಿ ಒಡಕು ಮೂಡ್ಯಾದಂತ. ಸದ್ಯದಾಗೆ ಕರುನಾಡ ನಾಟಕದ ಮರಾಠಿ ಆವೃತ್ತಿ ರಿಲೀಸ್ ಆಕೈತ್ರಿ. ಇಲ್ಲಿ ಎಲ್ಡ್ ಪಕ್ಷ ಮೈತ್ರಿಗೇ ಅಷ್ಟ್ ಹೊಡದಾಟ ಬಡದಾಟ ಆಗಿ, ಅಷ್ಟಕೊಂದು ಅತೃಪ್ತಾತ್ಮಗಳು ಹುಟ್ಟಿದ್ವು. ಇನ್ ಅಲ್ಲಿ ಮೂರು ಪಕ್ಷ ಅಂದ್ರ ಮುಸುಕಿನಮರೆ ಗುದ್ದಾಟಗಳು ಎಷ್ಟಾಗತಾವು ಹೇಳ್ರಿ’ ಎಂದಳು.

‘ಹ್ಞೂಂ ಮತ್ತ... ಕೂಸು ಚಿವುಟಿ ಅಳಿಸಾಕ ಕಮಲಕ್ಕನ ಮಂದಿ ಅದಾರಲ್ಲವಾ’ ನಾನು ನಕ್ಕೆ.

‘ಚಿವುಟಿ ಅಳಿಸೂದು ಎಲ್ಲಾ ದೇಶಕಾಲದೊಳಗ ನಡಿಯೂದರಿ ಆಂಟಿ. ಆಗ ಇವ್ರು ಅಳತಾರ ಅಂದ್ರ ಇವ್ರ ಫೆವಿಕಾಲ್ ಬ್ರಾಂಡ್ ಅಂಟು ಅಷ್ಟ್ ಗಟ್ಟಿಯಿಲ್ಲ ಅಂದಂಗ ಆತಿಲ್ಲೋ’ ಎಂದಳು.

ADVERTISEMENT

‘ಮಂದಿ ಕಾರುಬಾರು ನಮಗೆದಕ್ಕ ಬಿಡವಾ, ನಮದೇ ಚಿಂತಿ ರಗಡ್ ಅದ. ಮತ್ತ ನೀ ಏನ್ ನಡಸೀಯವಾ’.

‘ನಾ ಇಟಾಲಿಯನ್ ಭಾಷಾ ಕಲಿಯಾಕ ಹತ್ತೀನ್ರಿ’ ಎಂದಳು. ಇವಳಿಗ್ಯಾಕೆ ಇಟಾಲಿಯನ್ ಎಂದು ನಾನು ಕಕ್ಕಾಬಿಕ್ಕಿಯಾದೆ.

‘ರಾಹುಲ್‍ಬಾಬಾಗ ಸಿಎಎ ಅರ್ಥ ಆಗಿಲ್ರಿ. ಇಟಾಲಿಯನ್‌ಗೆ ಭಾಷಾಂತರ ಮಾಡಿದ್ರ, ಅದನ್ನಾರೂ ಓದಿಕೆಂಡು, ಅಡ್ನಾಡಿ ಮಾತಾಡೂದು ಬಿಡ್ತಾನ ಅಂತ ನಮ್ ‘ಶಾ’ಣ್ಯಾರು ಹೇಳ್ಯಾರ, ಅದಕ್ಕರೀ’ ಎಂದಳು.

‘ಮದ್ಲು ಅಸ್ಸಾಮೀ, ಬಂಗಾಳಿ, ಕನ್ನಡ ಹೀಂಗ ಭಾರತೀಯ ಭಾಷೆಗೂ ಅನುವಾದಿಸ್ರಿ. ನಮ್ಮ ಮಂದಿಗೂ ಒಂದೀಟು ತಿಳೀತೈತಿ’ ಎಂದೆ.

‘ಹಿಂದಿವಳಗ ಐತಿ, ಓದ್ಕಂತಾರೆ ಬಿಡ್ರಿ’ ಎಂದು ಅಸಡ್ಡೆಯಿಂದ ಅಂದಳು.

‘ಆರ್ಥಿಕ ಹಿಂಜರಿತ, ಜಿಡಿಪಿ ಪಾತಾಳಕ್ಕಿಳಿದೈತಿ ಅಂತೆಲ್ಲ ಆರ್ಥಿಕ ತಜ್ಞರು ಇಂಗ್ಲೀಷದಾಗೆ ಕೊರೀತಾರ. ಅವ್ನೆಲ್ಲ ಗುಜರಾತಿಗೆ ಅನುವಾದ ಮಾಡಿಸಿದರ ನಿಮ್ಮ ಶಾಣ್ಯಾರಿಗೆ ಅರ್ಥ ಆಗ್ತಿತ್ತು’ ಎಂದೆ. ಅವಳು ಪಟ್ಟುಬಿಡದೆ, ‘ಸುಳ್ಳೇ ಬಡಕೊಳ್ತಾರ‍್ರಿ, ಜಿಡಿಪಿ ಆಕಾಶಕ್ಕೇರೈತಿ ಅಂತ ನಾವೇ ಇಂಗ್ಲೀಷದಾಗೆ ವರದಿ ಮಾಡಿ ನಿಮ್ಮ ತಜ್ಞರಿಗೆ ಕೊಡ್ತೀವ್ರಿ’ ಎಂದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.