ADVERTISEMENT

ಚುರುಮುರಿ | ಅತ್ತೆ- ಸೊಸೆ ಜಾತಕ

ಬಿ.ಆರ್.ಸುಬ್ರಹ್ಮಣ್ಯ
Published 3 ಜುಲೈ 2020, 20:32 IST
Last Updated 3 ಜುಲೈ 2020, 20:32 IST
   

‘ಜ್ಯೋತಿಷ್ಯ ನಂಬ್ತಿಯೇನಲೇ...?’ ಯಾವುದೋ ಲಹರಿಯಲ್ಲಿ ಮುಳುಗಿ ತನ್ಮಯನಾಗಿದ್ದ ರುದ್ರೇಶಿಯನ್ನು ಚಂಬಸ್ಯನ ಈ ಅನಿರೀಕ್ಷಿತ ಪ್ರಶ್ನೆಯ ಬಾಣ ಒಮ್ಮೆಲೇ ತಬ್ಬಿಬ್ಬು ಮಾಡಿತು.

‘ಈಗ್ಯಾಕಲೇ ಆ ಪ್ರಶ್ನೆ?’ ರುದ್ರೇಶಿ ಮರು ಪ್ರಶ್ನಿಸಿದ.

‘ಯಾಕೂ ಇಲ್ಲ, ವುಡುಗ ವುಡುಗಿ ಜಾತಕ ನೋಡಿ ಅಯ್ಯನೇರು ಒಪ್ಪಿಗಿ ಕೊಟ್ಟ ಮ್ಯಾಗೇ ಮದವಿ ಆಕ್ಕವಿ. ಆದ್ರೂ ಮನಿಯಾಗಿ ಜಗ್ಗಿ
ಜಗಳ ಆಗ್ತಾವು. ಮತ್ತಿಪ್ಪಟ್ಟು ಜಾತ್ಕ ನೋಡದ್ಯಾಕಪ್ಪಜ್ಜಿ?’

ADVERTISEMENT

‘ಅವುದು ಕಣಲೇ, ನೀನೇಳದ್ರಾಗೂ ನಿಜ ಐತಿ. ನಮ್ಮನಿಯಾಗು ನನ್ನೆಂಡ್ರುನೂ ನಮ್ಮವ್ವನೂ ಏನ್ ಕಮ್ಮಿ ಜಗಳ ಆಡ್ತಾರಾ? ಅಕಿ ಮಾತ್ ಇಕಿಗಾಗಲ್ಲ, ಇಕಿ ಮಾತ್ ಅಕಿಗಾಗಲ್ಲ’.

‘ಬರೇ ನಿಮ್ಮನಿದೇ ಯೇಳ್ತ್ಯಲ್ಲೋ ಶಂಬುಲಿಂಗ! ನಮ್ಮನಿದ್ ಕೇಳು. ಉಗಾದಿ ಅಬ್ಬುಕ್ಕಂತ ಊರಿಂದ ನಮ್ಮವ್ವ ಬಂದುತ್ತು. ಲಾಕ್‍ಡೌನ್ ಅಂತ ಇಲ್ಲೇ ಉಳಕ್ಯಂತು. ಅವತ್ತಿಂದ ಸುರುವಾತ್ ನೋಡಪ್ಪ ನಮವ್ವಗೂ ನನ್ನೆಂಡತಿಗೂ ಜಟಾಪಟಿ...’

‘ಆಮೇಲೆ...?’ ಬಹಳ ಆಸಕ್ತಿಯಿಂದ ಕೇಳಿದ ರುದ್ರೇಶಿ.

‘ಆಮ್ಯಾಗೇನು? ದಿನಾ ಅಕಿ ರೂಮ್‍ನ್ಯಾಗ್ ಅಕಿನ್ ಕ್ವಾರಂಟೈನ್ ಮಾಡಿಸಿ, ಇಕಿ ರೂಮ್‌ನ್ಯಾಗ್‌ ಇಕಿನ್ ಕ್ವಾರಂಟೈನ್ ಮಾಡಿಸಿ, ಇಡೀ ಮನೀನ ಲಾಕ್‍ಡೌನ್ ಮಾಡಿಡದೇ ನನ್ನ ದಿನನಿತ್ಯುದ್ ಕೆಲಸ ಆಗ್ಬುಟ್ಟೈತಿ’.

‘ಅಂಗರೆ ನಿಮ್ಮನಿ ಕೊರೋನ ಕಲಹದ ವಿಶೇಷ ನಿಗಾ ವಲಯ ಆಗೇತಿ ಅನ್ನು’.

‘ಅವುದಲೇ ರುದ್ರಿ, ಸರ್ಕಾರ ಲಾಕ್‍ಡೌನ್ ಮುಗಿಸಿದ್ರೂ ನಮ್ಮನಿ ಒಳ್ಗ ಲಾಕ್‍ಡೌನ್ ಆಕ್ಯಂಡಿರಾದೆ ಪಾಡು! ಈ ಕ್ವರಾನ ಮುಗಿದ್ರೂ ಮುಗಿದಾತು, ನಮ್ಮನಿ ಕಲಹಾ ಮುಗಿವಲ್ದಲೇ’.

‘ಓ... ಇಷ್ಟೆಲ್ಲ ರಂಪ ಆಗಿರದಿಕ್ಕೇ ಜ್ಯೋತಿಷ್ಯ ಸರಿ ಐತಾ ಅಂತ ಕೇಳಿದ್ದಾ ನೀನು? ಜ್ಯೋತಿಷ್ಯ ಸರಿಯಾಗೇ ಐತಲೇ. ಯಡವಟ್ಟು ಏನಪ್ಪಾಂದ್ರೆ, ಗಂಡ ಯೆಂಡತಿ ಜಾತಕ ನೋಡದು ಬುಟ್ಬುಟ್ಟು, ಇನ್‍ಮ್ಯಾಗೆ ಅತ್ತಿ-ಸ್ವಸಿ ಜಾತಕ ನೋಡುಸ್ಬಕು, ತಿಳ್ಕ’ ಎಂದ ರುದ್ರೇಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.