ADVERTISEMENT

ಚುರುಮುರಿ: ರಾಜಾಹುಲಿ ರಹಸ್ಯ

ಮಣ್ಣೆ ರಾಜು
Published 22 ಸೆಪ್ಟೆಂಬರ್ 2020, 19:30 IST
Last Updated 22 ಸೆಪ್ಟೆಂಬರ್ 2020, 19:30 IST
   

‘ರಾಜಾಧಿರಾಜ, ರಾಜಾಹುಲಿ ಮಹಾರಾಜರಿಗೆ ಜಯವಾಗಲೀ...’ ರಾಜಾಹುಲಿ ಮಹಾರಾಜರು ಆಗಮಿಸಿ ಸಿಂಹಾಸನ ಏರಿ, ಮಾಸ್ಕ್ ತೆಗೆದು, ‘ಮಂತ್ರಿಗಳೇ, ರಾಜ್ಯದ ಪ್ರಜೆಗಳೆಲ್ಲಾ ಕ್ಷೇಮವೇ?...’ ಕೇಳಿದರು.

‘ಕೊರೊನಾ ಕಾಟದಲ್ಲಿ ಪ್ರಜೆಗಳು ಮಾಸ್ಕ್ ಹಾಕಿಕೊಂಡು ಬಾಯಿ ಮುಚ್ಚಿಕೊಂಡಿದ್ದಾರೆ. ಮಳೆಯಲ್ಲಿ ನೆಂದು, ನೊಂದು ತಣ್ಣಗಾಗಿದ್ದಾರೆ. ಆದರೆ, ತಮ್ಮ ಕ್ಷೇಮವೇ ಆತಂಕಕಾರಿ ಪ್ರಭು...’ ಮಂತ್ರಿ ಅಳುಕಿನಿಂದಲೇ ಹೇಳಿದರು.

‘ನಮಗೇನು ಕಮ್ಮಿಯಾಗಿದೆ? ಸೌಖ್ಯವಿದೆ, ಸಾಮ್ರಾಜ್ಯವಿದೆ. ಮಣ್ಣಿನ ಮಕ್ಕಳು, ಗಾಂಧಿ ಬಳಗದವರೇ ನನ್ನ ಸಾಮರ್ಥ್ಯಕ್ಕೆ ಮನಸೋತು ತೆಪ್ಪಗಿದ್ದಾರೆ’ ಎಂದರು ರಾಜಾಹುಲಿ.

ADVERTISEMENT

‘ಕಮಲ ಕುಲದ ಹುರಿಯಾಳುಗಳಿಂದ ನಿಮಗೆ ಕುರ್ಚಿಕಂಟಕವಿದೆ ಎಂದು ಆಸ್ಥಾನ ಪಂಡಿತರು ಹೇಳುತ್ತಿದ್ದಾರೆ...’

‘ಹೌದೇ?!... ಸುಮ್ಮನಿರುವ ರಾಜಾಹುಲಿಯನ್ನು ಕೆಣಕಿ, ಕೆರಳಿಸುವುದು ಅಪಾಯ ಎಂದು ಅವರಿಗೆ ಸಂದೇಶ ರವಾನಿಸಿ. ಕೊರೊನಾ ಕಾರಣಕ್ಕೆ ಹೋಂ ಕ್ವಾರಂಟೈನ್ ಆಗಿ, ಮಾಸ್ಕ್ ಹಾಕಿ ಮೌನವಾಗಿರುವೆ ಎಂದಮಾತ್ರಕ್ಕೆ ಈ ರಾಜಾಹುಲಿ ಕೋಪ, ಪ್ರತಾಪ ಕಳೆದುಕೊಂಡಿದೆ ಎಂದರ್ಥವಲ್ಲ’ ಎಂದು ಗರ್ಜಿಸಿದರು.

‘ತಮಗೆ ವಯಸ್ಸಾಗಿದೆಯಂತೆ, ರಾಜ್ಯಭಾರದ ಭಾರ ಹೊರಲಾಗುತ್ತಿಲ್ಲ ಎಂದು ತಮ್ಮ ಸಿಂಹಾಸನ ಕಸಿಯಲು ಒಳಶತ್ರುಗಳು ಒಳಸಂಚು ನಡೆಸಿದ್ದಾರೆ ಪ್ರಭು’.

‘ಅಸಾಧ್ಯ... ಹುಲಿ ವೇಷ ಹಾಕಿದವರೆಲ್ಲಾ ಹುಲಿಗಳಾಗೊಲ್ಲ. ನಾನು ಪರಾಕ್ರಮಿ ರಾಜಾಹುಲಿ. ವಯಸ್ಸಾದರೂ ಹುಲ್ಲು ತಿನ್ನುವುದಿಲ್ಲ. ಬೇಕಾದರೆ, ಆಪರೇಷನ್ ಮಾಡಿ ಬೇಟೆ ಗಿಟ್ಟಿಸುವ ಶಕ್ತಿ ಮತ್ತು ಸಾಮರ್ಥ್ಯವಿದೆ ಎಂದು ಶತ್ರುಗಳಿಗೆ ಮನದಟ್ಟು ಮಾಡಿ’.

‘ಆದರೂ ಪ್ರಭು, ತಾವು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಿಬಿಡುತ್ತೀರಿ’ ಮಂತ್ರಿಗೆ ಹುಸಿಕೋಪ.

‘ಇಲ್ಲ ಮಂತ್ರಿಗಳೇ, ಅನುಭವ ಪಾಠ ಕಲಿಸಿದೆ. ನಾನೀಗ ಪಳಗಿ ಪಕ್ವವಾಗಿದ್ದೇನೆ. ಆತ್ಮೀಯರು ಯಾರು, ಹಾಥ್‍ಮೀಯರು ಯಾರು ಎಂಬುದನ್ನು ವಿಂಗಡಿಸುವುದನ್ನು ಕಲಿತಿದ್ದೇನೆ ಹಹ್ಹಹ್ಹ...’ ರಾಜಾಹುಲಿ ನಗೆಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.