ADVERTISEMENT

ಆನ್‍ಲೈನ್ ಮೋಹ

ಮಣ್ಣೆ ರಾಜು
Published 21 ಜುಲೈ 2020, 19:31 IST
Last Updated 21 ಜುಲೈ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಟ್ನಿಹಳ್ಳಿ ಸರ್ಕಾರಿ ಶಾಲೆ ಮಕ್ಕಳು ಖಾಸಗಿ ಶಾಲೆ ಸೇರುತ್ತಿದ್ದಾರೆ ಎಂಬ ಆತಂಕದ ವಿಚಾರ ತಿಳಿದು ಶಿಕ್ಷಣ ಇಲಾಖೆ ಅಧಿಕಾರಿಗಳು ದೌಡಾಯಿಸಿ ಬಂದು ಪಂಚಾಯಿತಿ ಕಟ್ಟೆಯಲ್ಲಿ ಪೋಷಕರ ಸಭೆ ನಡೆಸಿದರು.

‘ಕೊರೊನಾ ಕಾಟ ಮುಗಿದ ನಂತರ ಶಾಲೆ ಆರಂಭಿಸುತ್ತೇವೆ, ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಬೇಡಿ’ ಶಿಕ್ಷಣ ಸಾಹೇಬ್ರು ಪೋಷಕರಿಗೆ ಮನವಿ ಮಾಡಿದರು.

‘ಶಾಲೆಯನ್ನು ಕೊರೊನಾ ಕ್ವಾರಂಟೈನ್ ಕೇಂದ್ರ ಮಾಡಿದ್ದೀರಿ. ಕೊರೊನಾ ಮುಗಿಯೋದು, ಶಾಲೆ ಶುರು ಮಾಡೋದು ಯಾವಾಗ?’ ಪೋಷಕರು ಸಿಟ್ಟಿಗೆದ್ದರು.

ADVERTISEMENT

‘ಕೊರೊನಾ ಕಾಲ್ಕಿತ್ತ ನಂತರ ಶಾಲೆಯನ್ನು ಸ್ಯಾನಿಟೈಸ್ ಮಾಡಿ ಓಪನ್ ಮಾಡ್ತೀವಿ’.

‘ಖಾಸಗಿ ಶಾಲೆ ಮಕ್ಕಳು ಆನ್‍ಲೈನ್ ಪಾಠ ಕೇಳ್ತಿದ್ದಾರೆ, ನೀವು ಶಾಲೆ ಶುರು ಮಾಡೋವರೆಗೂ ನಮ್ಮ ಮಕ್ಕಳು ಗೋಲಿ ಆಡಿಕೊಂಡಿರಬೇಕಾ?’ ಒಬ್ಬರು ರೇಗಿದರು.

‘ನೀವು ತಡ ಮಾಡಿದ್ರೆ ಸರ್ಕಾರಿ ಶಾಲೆ ಮಕ್ಕಳೆಲ್ಲಾ ಖಾಸಗಿಯವರ ಪಾಲಾಗುತ್ತವೆ’ ಮತ್ತೊಬ್ಬರು ಎಚ್ಚರಿಸಿದರು.

‘ಹಾಗೆ ಮಾಡಬೇಡಿ, ಸರ್ಕಾರಿ ಶಾಲೆ ಉಳಿಸಿ, ಸರ್ಕಾರ ಮಕ್ಕಳಿಗೆ ಉಚಿತವಾಗಿ ಸೈಕಲ್, ಯೂನಿಫಾರಂ, ಬಿಸಿಯೂಟ, ಪಠ್ಯಪುಸ್ತಕ ಕೊಡುತ್ತದೆ’ ಹೆಡ್‍ಮೇಷ್ಟ್ರು ವಿನಂತಿಸಿದರು.

‘ಸಾಕಾಗೊಲ್ಲ, ಮೊಬೈಲ್ ಕೊಟ್ಟು ಆನ್‍ಲೈನ್ ಕ್ಲಾಸ್ ಶುರು ಮಾಡಬೇಕು’.

‘ಕೊರೊನಾ ಖರ್ಚು ಜಾಸ್ತಿಯಾಗುತ್ತಿದೆ. ಮೊಬೈಲ್ ಕೊಡಿಸಲು ಸರ್ಕಾರಕ್ಕೆ ಕಷ್ಟ ಆಗುತ್ತದೆ’ ಸಾಹೇಬ್ರು ಇರೋ ವಿಚಾರ ಹೇಳಿದರು.

‘ಸರ್ಕಾರಕ್ಕೆ ಹೆಚ್ಚುವರಿ ಹೊರೆ ಮಾಡೊಲ್ಲ, ಸೈಕಲ್ ಬದಲು ಮೊಬೈಲ್ ಕೊಡಲಿ’.

‘ಮೊಬೈಲ್ ಇದ್ದರೆ ಸಾಲದು, ಇಂಟರ್‌ನೆಟ್ ಬೇಕಾಗುತ್ತದೆ’ ಸಾಹೇಬ್ರು ಹೇಳಿದರು.

‘ಬಿಸಿಯೂಟ ಕಟ್ ಮಾಡಿ, ಆ ಹಣದಲ್ಲಿ ಇಂಟರ್‌ನೆಟ್ ಸೌಲಭ್ಯ ಕೊಡಿ...’ ಪೋಷಕರ ಒಕ್ಕೊರಲ ಒತ್ತಾಯ.

ಸಾಹೇಬ್ರಿಗೆ ಮಾತು ಹೊರಡಲಿಲ್ಲ, ‘ನಿಮ್ಮ ಅಭಿಪ್ರಾಯಗಳನ್ನು ಸರ್ಕಾರಕ್ಕೆ ತಲುಪಿಸುತ್ತೇನೆ’ ಎಂದು ಹೇಳಿ ಸಭೆ ಮುಗಿಸಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.