ADVERTISEMENT

ಚುರುಮುರಿ | ಸಾಧನಾ ಪಟ್ಟಿ

ಸುಮಂಗಲಾ
Published 27 ಫೆಬ್ರುವರಿ 2023, 0:00 IST
Last Updated 27 ಫೆಬ್ರುವರಿ 2023, 0:00 IST
   

ಬೆಕ್ಕಣ್ಣ ಬೆಳಗ್ಗೆಯಿಂದ ಒಂದು ಟೈಮರ್ ಇಟ್ಟುಕೊಂಡು, ಸೆಲ್ಫಿ ತೆಗೆದುಕೊಳ್ಳುವುದು, ಎಷ್ಟು ಎಂದು ಲೆಕ್ಕಹಾಕುವುದು, ಮತ್ತೆ ಸೆಲ್ಫಿ ತೆಗೆದುಕೊಳ್ಳುವುದು, ಹೀಗೆ ಮಾಡುತ್ತಲೇ ಇತ್ತು.

‘ಏನು ಕಾರುಬಾರು ನಡಸೀಯಲೇ... ಫೇಸ್‌ಬುಕ್ಕಿಗಾಗಿ ಇಷ್ಟಕೊಂದು ಸೆಲ್ಫಿ ತೆಕ್ಕೊಳಾಕೆ ಹತ್ತೀಯೇನ್’ ಎಂದು ಅಚ್ಚರಿಯಿಂದ ಕೇಳಿದೆ.

‘ಎಲ್ಲಾದಕ್ಕೆ ಏನು ಏನು ಅಂತ ಅಡ್ಡಬಾಯಿ ಹಾಕ್ತೀ, ನಂದು ಒಂದೂ ಕೆಲಸ ಸುದ್ದ ನಡಿಯಂಗಿಲ್ಲ. ನಮ್ಮ ಅಕ್ಷಯ ಅಂಕಲ್ಲು 3 ನಿಮಿಷಕ್ಕೆ 184 ಸೆಲ್ಫಿ ತೆಗಿಸ್ಕಂಡು ಗಿನ್ನೆಸ್ ಮಾಡ್ಯಾನ. ನಾ 3 ನಿಮಿಷಕ್ಕೆ 186 ಸೆಲ್ಫಿ ತೆಕ್ಕಂಡು ಅವನ ಗಿನ್ನೆಸ್ ದಾಖಲೆ ಮುರಿಯೋದಕ್ಕೆ ಪ್ರಾಕ್ಟೀಸ್ ಮಾಡಾಕ್ಹತ್ತೀನಿ’ ಎಂದು ಮೆತ್ತಗೆ ಉಲಿಯಿತು.

ADVERTISEMENT

‘ಸೆಲ್ಫಿ ತಗಂಡು ರೆಕಾರ್ಡ್ ಮಾಡಿದಂಗೆ, ಅವನ ಸೆಲ್ಫಿ ಸಿನಿಮಾ ಬಾಕ್ಸಾಫೀಸಿನಾಗೆ ಪೂರಾ ತೋಪಾಗಿದ್ದೂ ಒಂದು ದಾಖಲೇನೇ ಇರಬಕು’.

‘ಆದ್ರೂ ಇಷ್ಟ್ ನಟ-ನಟಿಯರೊಳಗೆ ವಿಶಿಷ್ಟ ದಾಖಲೆ ಮಾಡಿದ್ದು ಅಂವಾ ಒಬ್ಬನೇ... ಪ್ರಧಾನಿ ಸಂದರ್ಶನ ಮಾಡಿದ ಏಕಮಾತ್ರ ನಟ-ಪತ್ರಕರ್ತ ಅಂವಾ’ ಬೆಕ್ಕಣ್ಣ ಅಭಿಮಾನದಿಂದ ಹೇಳಿತು.

‘ಹಿಂತಾ ಎಲ್ಲ ಸಾಧನೆಗಳಿಗೆ ಗಿನ್ನೆಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಥರಾ ನಾವೇ ಒಂದು ರೆಕಾರ್ಡ್ ಬುಕ್ ಶುರು ಮಾಡಬೇಕು, ಹೌದಿಲ್ಲೋ?’ ಬೆಕ್ಕಣ್ಣ ಮತ್ತೆ ಭಾರೀ ಗಂಭೀರವಾಗಿ ಕೇಳಿತು.

‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಂತ ಶುರು ಮಾಡಬೌದು. ರಾಜಕಾರಣಿಗಳಲ್ಲಿ ಭಯಂಕರ ಜೋರು ಉರಿನಾಲಗೆ ರೆಕಾರ್ಡ್, ಚುನಾವಣೆ ಬರತಿದ್ದಂಗೆ ಯಾರು ಎಷ್ಟ್ ನಿಮಿಷದಲ್ಲಿ ಎಷ್ಟ್ ಭರವಸೆ ಕೊಡತಾರ ಅಂತ ಒಂದು ರೆಕಾರ್ಡ್...’ ನಾನು ಪಟ್ಟಿ ಮಾಡತೊಡಗಿದೆ.

‘ಎಷ್ಟ್ ಫಟಾಫಟ್ ಆಪರೇಶನ್ ಕಮಲ ಮಾಡಿದ್ರು ಅಂತ ಒಂದು ರೆಕಾರ್ಡ್. ಚುನಾವಣೆ ಬರತಿದ್ದಂಗೆ ಯಾವ ರಾಜ್ಯದ ಆಡಳಿತ ಪಕ್ಷ ಎಷ್ಟು ಕೋಟಿ ರೂಪಾಯಿ ಯೋಜನೆ ಶುರು ಮಾಡಿತು ಅಂತ ರೆಕಾರ್ಡ್. ಪ್ರಧಾನಿ- ಗೃಹ ಮಂತ್ರಿಗಳ ರಾಜ್ಯ ಭೇಟಿಗಳ ರೆಕಾರ್ಡ್...’ ಬೆಕ್ಕಣ್ಣ ವಿವಿಧ ಸಾಧನೆಗಳ ಪಟ್ಟಿ ಮಾಡುತ್ತಲೇ ಇದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.