‘ಬ್ಯಾಗ್ ಬೇಕೇ ಬ್ಯಾಗೂ... ಬೆಳಗಾವಿ ಬ್ಯಾಗು, ಬೆಂಗಳೂರು ಬ್ಯಾಗು, ಮಂಡ್ಯ ಬ್ಯಾಗೂ...’ ಎಂದ ತೆಪರೇಸಿ. ‘ಬೆಳಗಾವಿ ಬ್ಯಾಗಲ್ಲಿ ಏನೈತಲೆ ತೆಪರ?’ ದುಬ್ಬೀರ ಕೇಳಿದ.
‘ಅದ್ರಲ್ಲಿ ಜಮೀರಣ್ಣ, ಯತ್ನಾಳು ಗುಸಗುಸ, ಪಿಸಪಿಸ ಮಾತಾಡೋದೈತಿ’.
‘ಹಂಗಾದ್ರೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ಟೀನ್ ಬ್ಯಾಗ್ ಹಾಕ್ಕಂಡಿದ್ರಲ್ಲ, ಅದ್ರಾಗೇನಿತ್ತು?’
‘ಅದ್ರಲ್ಲಿ ಇಡೀ ಜಗತ್ತೇ ಇತ್ತು’.
‘ಸರಿ, ಈಗ ಮಂಡ್ಯ ಬ್ಯಾಗಲ್ಲಿ ಏನೈತಿ?’.
‘ಅದ್ರಲ್ಲಿ ಭರ್ಜರಿ ಆ್ಯಂಡ್ ಸರ್ಜರಿ! ಸಮ್ಮೇಳ ನದ ಊಟ ಭರ್ಜರಿ, ಕವಿಗಳಿಗೆ ಸರ್ಜರಿ!’
‘ಸರ್ಜರಿನಾ? ಏನು ಹಂಗಂದ್ರೆ?’
‘ಅಂದ್ರೇ... ಕವಿಗಳು ಕವನ ಓದಾಕೆ ಬರೀ ಮೂರೇ ನಿಮಿಷ ಟೈಂ ಕೊಟ್ಟಾರಂತೆ. ಅವರು ಕೆಮ್ಮಾಕೆ, ಕ್ಯಾಕರಿಸಾಕೇ ಮೂರು ನಿಮಿಷ ಬೇಕು, ಇನ್ನು ಕವನ ಓದೋದೆಲ್ಲಿ?’
‘ಅವರು ಕೆಮ್ಮಿ, ಕ್ಯಾಕರಿಸಿದ್ದನ್ನೇ ಕವನ ಅಂದ್ಕಂಡ್ರಾತು’ ಗುಡ್ಡೆ ನಕ್ಕ.
‘ಅದಿರ್‍ಲಿ, ಬರೀ ಊರಿನ ಹೆಸರಿನ ಬ್ಯಾಗಷ್ಟೇ ಅದಾವೋ ಮಂದಿ ಹೆಸರಿನವೂ ಅದಾವೋ?’ ದುಬ್ಬೀರ ಕೇಳಿದ.
‘ಅದಾವು, ನಮೋ-ಶಾ ಬ್ಯಾಗು, ರಾಹುಲ್ ಬ್ಯಾಗು, ಬಂಡೆ ಬ್ಯಾಗು, ಬ್ರದರ್ ಬ್ಯಾಗು ಎಲ್ಲ ಅದಾವು’ ಎಂದ ತೆಪರೇಸಿ.
‘ಈ ಜಿ.ಟಿ.ದೇವೇಗೌಡ, ಸೋಮಶೇಖರ್ ಬ್ಯಾಗ್‌ಗಳಿಲ್ವಾ?’
‘ಅವೆಲ್ಲ ಸಿದ್ರಾಮಣ್ಣ ಅವರತ್ರ ಅದಾವು’.
‘ಸಿದ್ರಾಮಣ್ಣರ ಬ್ಯಾಗಲ್ಲಿ?’
‘ಬರೀ ಮುಡಾ ಫೈಲದಾವು’.
‘ನಮೋ-ಶಾ ಬ್ಯಾಗಲ್ಲಿ?’
‘ಒಂದು ದೇಶ, ಒಬ್ಬನೇ ನಾಯಕ!’
‘ಹಂಗಾರೆ ಬಂಡೆ ಬ್ಯಾಗಲ್ಲಿ ಸಿಎಂ ಕುರ್ಚಿ ಇರಬೋದಾ?’ ಕೊಟ್ರೇಶಿ ಕೊಕ್ಕೆ.
‘ಇರಬೋದು, ಹಂಗೇ ಬ್ರದರ್ ಬ್ಯಾಗಲ್ಲಿ ಆ ಕುರ್ಚಿ ತಪ್ಪಿಸೋದೆಂಗೆ ಅನ್ನೋದೂ ಇರಬೋದು’.
‘ಎಲ್ಲ ಸರಿ, ನಿನ್ ಬ್ಯಾಗಿನಾಗೇನೈತೋ ತೆಪರಾ?’ ದುಬ್ಬೀರ ಕೇಳಿದ.
‘ಅವನಿಗೆ ಬ್ಯಾಗೇ ಇಲ್ಲ, ಅವ್ನು ಯಾವಾಗ್ಲೂ ಅವನೆಂಡ್ತಿ ವ್ಯಾನಿಟಿ ಬ್ಯಾಗು ಹಿಡ್ಕಂಡಿರ್ತಾನೆ’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.