
‘ದೆಲ್ಲೀಲಿ ಎಐ ಮೀಟಿಂಗಂತೆ ಕನ್ರೋ. ಲಕ್ಷಾಂತರ ಟೆಕ್ಕಿಗಳು ಬತ್ತಾವರಂತೆ. ಜಗತ್ತು ಬೇಜಾನ್ ಎಐ, ಬಯೋವೆಪನ್ ಉಪಯೋಗಿಸಿ ಮೌಲ್ಯ ಕಳಕಂಡು ವಿನಾಶಕ್ಕೆ ಬಂದು ನಿಲ್ತಾ ಅದೇನೋ ಅಂತ ಅನುಮಾನಾಗ್ಯದೆ ಅಣ್ತಮ್ಮಾ’ ತುರೇಮಣೆ ಘೋಷಿಸಿದರು.
‘ಅಣೈ ಕೇಳಿಲ್ಲಿ. ರಾಜಕಾರಣಿಗಳ ಹಳೇ ವಿಡಿಯೊನ ಪೊಲಿಟಿಕಲ್ ಜಿಪಿಟಿಗೆ ಅಪ್‍ಲೋಡ್ ಮಾಡಿದರೆ ಹಿಂದೆ ಏನೇನು ಕರ್ಮಕಾಂಡ ಮಾಡಿದ್ದರು ಅಂತ ಹೇಳ್ತದಂತೆ’ ಅಂತ ಸೋಜಿಗಪಟ್ಟೆ.
‘ರಾಜಕಾರಣಿಯ ಹೆಸರಿನ ಹ್ಯಾಷ್‍ಟ್ಯಾಗ್ ಹಾಕಿ ರಿವರ್ಸ್ ರೀಸರ್ಚ್ ವಿಧಾನದಲ್ಲಿ ಹುಡುಕಿದ್ರೆ ಹಳೇ ಕಥೆ ಬಿಚ್ಕತದಂತೆ ಕನೋ’ ತುರೇಮಣೆ ವಿವರ ಕೊಟ್ಟು ಕೆಲವು ರಾಜಕಾರಣಿಗಳ ವಿಡಿಯೊಗಳನ್ನ ಎಐ ಟೂಲಿಗೆ ಹಾಕಿದರು.
‘ನೋಡ್ರಪ್ಪ ಇವರ ಚಾಲು. ಕಳ್ಳತನದಿಂದ ರೌಡಿಶೀಟಿಗೆ ಬಂದು ಕೊಲೆ ಮಾಡ್ಸಗಂಟ ಮುಂದುವರಿದವೆ. ಜೈಲಿಂದ ಕಾರುಬಾರು ಮಾಡಿ ರಾಜಕೀಯಕ್ಕೆ ಎಂಟ್ರಿ ತಗಂದವೆ. ಇವುಕ್ಕೆ ಏನಂತ ಬೈಯದು?’ ತುರೇಮಣೆಗೆ ಕ್ವಾಪದಲ್ಲಿ ಮಾತು ಹೊಂಡಲಿಲ್ಲ.
‘ಹಂಗಾರೆ ಕನ್ನಡ ನಿಘಂಟಲ್ಲಿ ಇರೋ ಎಲ್ಲಾ ಬೋಗುಳ ಇವರಿಗೆ ಅನ್ವಯಿಸ್ತವೆ. ರಾಜಕಾರಣಿಗಳು ಯಂಗಿರಬೇಕು ಅಂತ ನಿನ್ನ ಎಐ ಹೇಳ್ತದೆ?’ ಯಂಟಪ್ಪಣ್ಣ ಕೇಳಿತು.
‘ನೋಡು ಅಣ್ತಮ್ಮ, ರಾಜಕೀಯಕ್ಕೆ ಬರೋರು ಕಾಸು–ಕರೇಮಣಿ ತಕ್ಕೋಗದೇ, ಗುಂಡು–ತುಂಡು ಬುಟ್ಟು, ಮೊಬೈಲು ಇಲ್ಲದೇ ಒಂದು ಜೊತೆ ಅಂಗಿ–ಚಡ್ಡಿ ಮಾತ್ರ ಹಿಡಕಂದು ಹಿಮಾಲಯಕ್ಕೆ ಒಬ್ಬರೇ ಹೋಗಿ ಐದು ವರ್ಸ ಇದ್ದರೆ ಶಾಸಕರಾಗಕೆ, ಏಳು ವರ್ಸ ಇದ್ದರೆ ಸಿಎಂ ಆಗಕ್ಕೆ ದಾಸತ್ತದೆ ಅಂತ ಅರ್ಥ’ ಅಂದ್ರು ತುರೇಮಣೆ.
‘ಯಾರೋ ಒಬ್ಬ ಬಂದು, ನಾನು ಹತ್ತೊರ್ಸದಿಂದ ಹಿಮಾಲಯದಲ್ಲಿ ಪಸಕೆ ಎತ್ತಿಕ್ಯಂದಿದ್ದೆ. ನಾನು ಪಿಎಂ ಆಗಬೈದಲ್ಲವಾ? ಅಂತ ಸುಳ್ಳಾಡಿದೆ ಹ್ಯಂಗೆ?’ ಅಂತ ನನ್ನ ಅನುಮಾನ ಹೇಳಿದಾಗ ಎಲ್ಲರೂ ಕ್ವಾಪದಲ್ಲಿ ಕಾಪಿ ಲೋಟಗಳನ್ನೇ ನನ್ನ ಮೇಲೆ ಎಸೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.