ADVERTISEMENT

ಚುರುಮುರಿ: ವ್ಯಾಕ್... ಸುರಂಗ!

ತುರುವೇಕೆರೆ ಪ್ರಸಾದ್
Published 7 ನವೆಂಬರ್ 2025, 23:47 IST
Last Updated 7 ನವೆಂಬರ್ 2025, 23:47 IST
.
.   

‘ಚಾಪೆ ಕೆಳಗೆ, ರಂಗೋಲಿ ಕೆಳಗೆ ತೂರೋದಿತ್ತು. ರಾಜಕೀಯದೋರು ಸುರಂಗದಲ್ಲಿ ತೂರ‍್ತಾವ್ರೆ’ ಎಂದ ಗುದ್ಲಿಂಗ.

‘ನೀನು ನಮ್ ಬೆಂಗ್ಳೂರು ವೊಸ ಸುರಂಗದ ಬಗ್ಗೆ ಯೋಳ್ತಿದೀಯ ಅನ್ನು! ಅಂಗೇ ತುರಂಗಕ್ಕೂ ಒಂದೊಂದು ಸುರಂಗ ಒಡುಸ್ಬುಟ್ರೆ ಈ ಸ್ಟಾರ್ ಕೈದಿಗಳು, ಅವಾಗವಾಗ ಓಗಿ ಬರೋ ರಾಜಕೀಯದೋರಿಗೂ ಶಾನೆ ಸಲೀಸಾಯ್ತದೆ’ ಎಂದ ಮಾಲಿಂಗ.

‘ಅನ್ಯಾಯವಾಗಿ ಲಾಲ್‌ಬಾಗ್ ಎಕ್ಕುಟ್ಟೋಯ್ತದೆ ಅಂತ ನಮ್ ಅಶೋಕಣ್ಣ ಶೋಕಿಸ್ತವ್ರೆ?’

ADVERTISEMENT

‘ಅದಕ್ಯಾಕ್ಲಾ ಶೋಕ? ಕ್ಯಾಲಿಫೋರ್ನಿಯಾದ ಫ್ರೆಸ್ನೋ ಸಿಟೀಲಿ ಮಾಡ್ದಂಗೆ ಲಾಲ್‌ಬಾಗ್ನೂ ಒಳಕ್ ಸೇರಿಸಿ ಅಂಡರ್‌ಗ್ರೌಂಡ್ ಲವ್ ಗಾರ್ಡನ್ ಮಾಡುದ್ರಾಯ್ತು’ ಎಂದ ಪರ‍್ಮೇಶಿ.

‘ನಿನ್ ಸಿಎಂ ಮಾಡ್ಬುಟ್ರೆ ಏರ್‌ಪೋರ್ಟು, ಚಿನ್ನಸ್ವಾಮಿ ಸ್ಟೇಡಿಯಂನೂ ನೆಲದೊಳಗೆ ಹೂತ್ ಹಾಕ್ಬಿಡ್ತೀಯ’.

‘ಸುಮ್ಕೆ ವಿರೋಧ ಮಾಡ್ಬೇಕು ಅಂತ ಮಾತಾಡ್ಬಾರ‍್ದು ಕಣ್ಲಾ! ಸುರಂಗ ಮಾಡದ್ರಿಂದ ಮುಂದೆ ಕಮಲದೋರ‍್ಗೂ ಒಳ್ಳೇದೇ ಆಯ್ತದೆ’.

‘ಒಳ್ಳೇದು ಎಂಗ್ಲಾ ಆಯ್ತದೆ?’

‘ರಸ್ತೆ ಗುಂಡಿಯಂಗೆ ಸುರಂಗದಲ್ಲೂ ಗುಂಡಿ ಆಯ್ತದೆ. ಆ ಗುಂಡಿ ಉಪಗ್ರಹಕ್ಕೂ ಕಾಣಾಕಿಲ್ಲ ನೋಡು. ಆಮೇಲೆ, ಹಿಂದೆ ರಾಜ್ರ ಅಂತಃಪುರದಲ್ಲಿ ಇಂಗೇ ಸುರಂಗ ಇರ‍್ತಿದ್ವಂತೆ. ಶತ್ರುಗಳು ಹಠಾತ್ ಮುತ್ತಿಗೆ ಆಕ್ದಾಗ ರಾಜ್ರು ಸುರಂಗದಲ್ಲಿ ತಪ್ಪುಸ್ಕೊಂಡ್ ತಲೆ ಮರುಸ್ಕೊತಿದ್ರಂತೆ’.

‘ಈಗ ಅಂತದ್ದೇನ್ ಬಂದೈತೆ ಅಂತೀನಿ?’

‘ರಾಜಕೀಯದೋರ ಪಾಲಿಗೆ ಪೇಪರ‍್ನೋರೇ ದೊಡ್ಡ ವೈರಿಗಳು ಕಣ್ಲಾ! ಕಾರ್ ಹಿಂದೇ ಬಂದ್ ಬುಡ್ತಾರೆ. ಅದ್ಕೇ ವಿಧಾನಸೌಧದಿಂದಲೇ ಸುರಂಗ ಒಡುಸ್ಕೊಂಡ್ ಬುಟ್ರೆ ಸಲೀಸಾಗಿ ಪೇಪರ‍್ನೋರ್ ಕೈಗೆ ಸಿಗದಂಗೆ ವಂಟ್ ಓಯ್ತಿರ‍್ಬಹುದು’.

‘ಮತ್ತೆ ಅದು ವಿಐಪಿ ಕಾರಿಡಾರ್ ಆಯ್ತದೆ ಅಂತ ಆಶೋಕಣ್ಣ ಯೋಳ್ತಿಲ್ವಾ?’

‘ಅದೆಂಗ್ಲಾ ಆಯ್ತದೆ? ಮೇಲಿನ್ ಗುಂಡಿಗಳ ಕೆಸರು, ಒಳಚರಂಡಿ ಕೊಚ್ಚೆ ಎಲ್ಲಾ ಲೀಕಾಗಿ ಸುರಂಗದೊಳಗೆ ಸುರಿಯಾಕಿಲ್ವಾ?’

‘ಅಯ್ಯೊ ಅದು ವಾಕ್ ಥ್ರೂ ಆಗಲ್ಲ, ವ್ಯಾಕ್... ಥೂ...’ ಎಂದು ಎಲ್ಲರೂ ಮುಖ ಕಿವುಚಿ ನಕ್ಕರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.