ADVERTISEMENT

ಚುರುಮುರಿ: ಗ್ರೇಟರ್ ಗಾರುಡಿ

ಲಿಂಗರಾಜು ಡಿ.ಎಸ್
Published 9 ಸೆಪ್ಟೆಂಬರ್ 2025, 0:09 IST
Last Updated 9 ಸೆಪ್ಟೆಂಬರ್ 2025, 0:09 IST
ಚುರುಮುರಿ
ಚುರುಮುರಿ   

ಶಿವತನಯನು ಬೆಂಗಳೂರನ್ನು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣಗಳೆಂಬ ಐದು ತುಂಡುಗಳಾಗಿ ಮಾಡಿ ಗ್ರೇಟರ್ ಬೆಂಗಳೂರೆಂದು ಮಾನಕರಣ ಮಾಡಿದ್ದನು. ಮರಿರಾಜಕಾರಣಿಗಳು ತಮಗೂ ಕೂಡ ಮತಗಳ್ಳತನ, ಬೂತುಚೇಷ್ಟೆಗೆ ಅವಕಾಶ ಸಿಗಲಿದೆ ಎಂದು ಡ್ರಾಮಾಂಚಿತ ರಾಗಿದ್ದರು. ಈ ಪ್ರಯುಕ್ತ ನಗರದಲ್ಲಿ ಡೌರಾಣಿಕ ನಾಟಕ ‘ಗ್ರೇಟರ್ ಗಾರುಡಿ’ ಏರ್ಪಡಿಸಲಾಗಿತ್ತು.

ಸೂತ್ರಧಾರನಾದ ತುರೇಮಣೆಯು ರಂಗಪ್ರವೇಶ ಮಾಡಿ, ‘ಸುಜನ ವಂದಿತ ಮುದವನೀಡು ಪಾಲಿಕೆ ತನಯನೇ ನಮಗಿನ್ನು ಶುಭದಿನ’ ಎಂದು ಹಾಡಿ ತೆರಳಿದೊಡನೇ ಐದೂ ಜನ ಪ್ರಾಂತ್ಯಾಧಿಕಾರಿಗಳು ಪ್ರವೇಶಿಸಿ ರಾಜ್ಯಭಾರ ಆರಂಭಿಸುವ ಮುನ್ನ ಇಷ್ಟಕ್ಕೆಲ್ಲಾ ಕಾರಣನಾದ ಡಿಕೆ ಪರಮಾತ್ಮನನ್ನು ಒಟ್ಟಾಗಿ ಕೊಂಡಾಡಿದರು.

‘ದೇವಾ, ನಿನ್ನ ಕೃಪೆಯಿಂದಾಗಿ ನಮಗೆ ಐದು ವಲಯಗಳು ದಕ್ಕಿವೆ. ಇವನ್ನು ಪಾಲಿಸಿಕೊಂಡು ಬಲಿ ಹಾಕುವ ರಹಸ್ಯವನ್ನು ತಿಳಿಸು ಕನಕವರಾಧೀಶ್ವರ’ ಎಂಬುದಾಗಿ ಬೇಡಿದರು.

ADVERTISEMENT

‘ಹೇಡಿತನವು ಕಾಡದಿರಲಿ, ಮೂಢತನವು ತೊಲಗಲಿ. ಕಮಲಪ್ರಿಯರೆಲ್ಲರ ತೇಜವನೆ ಕಳೆಯಲಿ. ನಿಮ್ಮ ಗಾರುಡಿ ಆರಂಭವಾಗಲಿ. ತೆರಿಗೆ ಮಂತ್ರ, ತಂತ್ರದಿಂ ಜನರಂ ಭ್ರಾಂತ ರನ್ನಾಗಿಸಿ ತೋರಿರಿ ಯಕ್ಷಿಣಿಯಾ’ ಎಂದು ಪರಮಾತ್ಮನು ಆಶೀರ್ವದಿಸಿದನು.

ಗ್ರೇಟರ್ ಸಾಮಂತರು ಖುಷಿಯಿಂದ ‘ಪಿಡಿವೆನು ಬಡಿವೆನು ಹೊಡೆದು ಬಡಿದು ಗೋಣ ಮುರಿವೆನು ಭಲಾರೆ’ ಎಂದು ನಗರ ಪ್ರದಕ್ಷಿಣೆಗೆ ಹೊರಟರು. ರಸ್ತೆಗಳೆಲ್ಲಾ ಅವ್ಯವಸ್ಥೆಯಾಗಿದ್ದು ಕಂಡು ದೂರು ನೀಡಿದವರಿಗೆ ‘ತಾಪವೇಕೆ. ಗ್ಯಾರಂಟಿಯ ಸೊಬಗಿಗೆ ತುಂಬು ತೆರಿಗೆಯಾ, ತೆರಳು ಮಂದಕುಮಾರ. ಕೇಳದಿರು ಇನ್ನೇನೂ’ ಎಂದು ಹೇಳಿ ‘ಮಾಯಕಾರ ಗಾರುಡಿ, ತಂತ್ರಕಾರ ಗಾರುಡಿ’ ಎಂಬ ಯುಗಳ ಗೀತೆ ಹಾಡುತ್ತಾ ತೆರಳಿದರು.

ಇದನ್ನು ಕಂಡ ಬಡ ಪ್ರಜೆಗಳು, ‘ಜಗಕದಾವ ಪಾಪವೋ, ವಿಧಿಕೂಪಕೆ ಹಾದಿಯೋ. ಏನು ಮಾಯವೋ, ಏನು ಚೋದ್ಯವೋ’ ಎಂದು ಬಾಯ ಮೇಲೆ ಬೆರಳಿಟ್ಟು ‘ಜಯಮಂಗಳಂ ಮುತ್ತಿನಾರತಿ ಎತ್ತಿರೆ ಭ್ರಾಂತಿಗೊಳಿಪ ಧೀರರಿಗೆ’ ಎನ್ನುವಲ್ಲಿಗೆ ನಾಟಕಕ್ಕೆ ತೆರೆ ಬಿದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.