ADVERTISEMENT

ಚುರುಮುರಿ: ಜಗದ್ಗುರು ಪುರಾಣ

ಸುಮಂಗಲಾ
Published 14 ಸೆಪ್ಟೆಂಬರ್ 2025, 23:30 IST
Last Updated 14 ಸೆಪ್ಟೆಂಬರ್ 2025, 23:30 IST
   

‘ಭಾರತವೇ ಈ ಭೂಲೋಕದ ಜಗದ್ಗುರು!’ ಅಂತ ಬೆಕ್ಕಣ್ಣ ಬೆಳಬೆಳಗ್ಗೆಯೇ ಖುಷಿಯಿಂದ ಕುಣಿಯಿತು.

ನಾನು ಇದು ಹೇಗೆ ಸಾಧ್ಯವೆಂದು ಹೌಹಾರಿಬಿಟ್ಟೆ.

‘ನೋಡಿಲ್ಲಿ’ ಎಂದು ‘ಪ್ರಜಾವಾಣಿ’ ಪತ್ರಿಕೆಯ ‘ವಿಜ್ಞಾನ ವಿಶೇಷ’ ಅಂಕಣ ಬರಹವನ್ನು ಮುಖಕ್ಕೆ ಹಿಡಿಯಿತು.

ADVERTISEMENT

‘ಮಂಗ್ಯಾನಂಥವ್ನೇ… ಹೆಡ್ಡಿಂಗೂ ಪೂರ್ಣ ಓದದೇ ಕುಣೀತೀಯ. ನಾವು ಗುಜರಿ ಲೋಕದ ಜಗದ್ಗುರು ಅಂತ ಅಲ್ಲಿರೋದು!’ ಎಂದು ಬೆಕ್ಕಣ್ಣನ ತಲೆ ಮೇಲೆ ಮೊಟಕಿದೆ.

ಬೆಕ್ಕಣ್ಣನ ಮುಖ ಇಂಗು ತಿಂದ ಮಂಗನಂತೆ ಆದರೂ ತೋರಗೊಡದೇ, ‘ನೋಡು ಮತ್ತೆ… ನಾವು ಇಡೀ ಭೂಮಂಡಲಕ್ಕೆ ಎಂಥ ಘನವಾದ ಸೇವೆ ಕೊಡಾಕೆ ಹತ್ತೀವಿ!’ ಎಂದಿತು.

‘ಅಮೆರಿಕದ 11/9 ದುರಂತದಲ್ಲಿ ಬಿದ್ದ ಎಲ್ಲಾ ಕಟ್ಟಡಗಳ 950 ಟನ್‌ ವಿಷಕಾರಿ ತ್ಯಾಜ್ಯ ನಮ್ಮ ದೇಶಕ್ಕೆ ಬಂತು. ಎಲ್ಲಾ ಶ್ರೀಮಂತ ದೇಶಗಳ ಪ್ಲಾಸ್ಟಿಕ್‌ ತ್ಯಾಜ್ಯ ಇಲ್ಲಿಗೆ ಒಗೀತಾರೆ. ಹಳೇ ಹಡಗುಗಳೆಲ್ಲ ವಿಲೇವಾರಿಗೆ ಅಲಂಗ್‌ ಬಂದರಿಗೆ ಬರತಾವೆ. ನಾವು ಆ ದೇಶಗಳ ತಿಪ್ಪೇಗುಂಡಿ ಆಗೀವಿ, ತಿಳೀತಿಲ್ಲೋ!’ ಎಂದೆ.

‘ಈ ಶ್ರೀಮಂತ ದೇಶಗಳು ಪ್ಲಾಸ್ಟಿಕ್ಕು, ವಿಷಕಾರಿ ತ್ಯಾಜ್ಯ, ಹಾಳುಮೂಳುಗಳನ್ನು ನಮ್ಮ ದೇಶಕ್ಕೆ ಕಳಿಸಿ, ತಮ್ಮ ರಸ್ತೆಗಳು, ಸಮುದ್ರ ದಡ ಎಲ್ಲ ಸ್ವಚ್ಛ ಇಟಕೋತಾರೆ. ನಮ್ಮ ಕಸವೇ ನಮಗೆ ಹಾಸಲುಂಟು, ಹೊದೆಯಲುಂಟು… ಅಂತಾದ್ರಲ್ಲಿ ಬೇರೆ ದೇಶಗಳ ಕಸಾನೂ ಇಲ್ಲೇ ಸುರಿತಾರೆ’ ಎಂದು ಬೆಕ್ಕಣ್ಣ ಗುರುಗುಟ್ಟಿತು.

ತುಸು ಹೊತ್ತು ಬಿಟ್ಟು, ‘ಹೋಗ್ಲಿಬಿಡು, ಇವತ್ತಾರೆ ಖೀರು ಮಾಡು’ ಎಂದು ಮೆತ್ತಗೆ ಉಲಿಯಿತು.

‘ಇವತ್‌ ಯಾವ ಹಬ್ಬ ಖೀರು ಮಾಡಕ್ಕೆ?’ ಎಂದೆ ಅಚ್ಚರಿಯಿಂದ.  

‘ಮಣಿಪುರ ಜನಾಂಗೀಯ ಘರ್ಷಣೆಯಲ್ಲಿ ಹೊತ್ತಿ ಉರೀತಾ ಎರಡು ವರ್ಷವಾತು. ನಮ್‌ ಜಗದ್ಗುರು ಮೋದಿ ಮಾಮಾರು ಮೊನ್ನೆ ಅಲ್ಲಿಗೆ ಹೋಗಿ ಅಭಿವೃದ್ಧಿ ಕೊಡುಗೆ ಕೊಟ್ಟು ಬಂದರು. ಅದಕ್ಕೇ!’ ಎಂದು ಮುಸಿ ಮುಸಿ ನಕ್ಕಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.