ADVERTISEMENT

ಚುರುಮುರಿ: ಮನೆ ದೇವರು!

ಬಿ.ಎನ್.ಮಲ್ಲೇಶ್
Published 12 ಜನವರಿ 2023, 19:32 IST
Last Updated 12 ಜನವರಿ 2023, 19:32 IST
   

ಅಪರೂಪಕ್ಕೆ ಹರಟೆಕಟ್ಟೆಗೆ ಬಂದಿದ್ದ ತಿಮ್ಮೇಶಿಯನ್ನು ಕಂಡು ದುಬ್ಬೀರನಿಗೆ ಖುಷಿಯಾಯಿತು. ‘ಏನೋ ತಿಮ್ಮಾ ಎಷ್ಟು ದಿನಾತು ನಿನ್ನ ನೋಡಿ, ಏನ್ಕತೆ?’ ಎಂದು ವಿಚಾರಿಸಿದ.

‘ನಂದು ಬಿಡಪ, ಇದ್ರೆ ಈ ಊರು, ಎದ್ರೆ ಇನ್ನೊಂದೂರು. ಎಲೆಕ್ಷನ್ ಬಿಸಿನೆಸ್‌ನಲ್ಲಿ ಟೈಮೇ ಸಿಗ್ತಿಲ್ಲ...’ ಎಂದ ತಿಮ್ಮೇಶಿ.

‘ಎಲೆಕ್ಷನ್ ಬಿಸಿನೆಸ್ಸಾ? ಅಂದ್ರೆ?’ ಗುಡ್ಡೆಗೆ ಅರ್ಥವಾಗಲಿಲ್ಲ.

ADVERTISEMENT

‘ಅಂದ್ರೇ ಈ ಪಾದಯಾತ್ರೆ, ಬಸ್ ಯಾತ್ರೆ, ಸಂಕಲ್ಪ ಯಾತ್ರೆ, ಸಮಾವೇಶ ಇವಕ್ಕೆಲ್ಲ ಫ್ಲೆಕ್ಸು, ಬ್ಯಾನರು, ಬಾವುಟ ಕಟ್ಟೋದು, ಕಟೌಟ್ ನಿಲ್ಸೋದು... ಬಿಡುವೇ ಇಲ್ಲ ಕಣ್ರಲೆ, ಎಲ್ಲ ಪಕ್ಷದೋರೂ ಕರೀತಾರೆ, ಕೆಲವು ಕಡೆ ಗಿಫ್ಟ್ ಹಂಚೋಕೂ ಕೊಡ್ತಾರೆ’ ತಿಮ್ಮೇಶಿ ವಿವರಿಸಿದ.

‘ಹಂಚೋಕೆ ಕೊಟ್ಟ ಗಿಫ್ಟಲ್ಲಿ ನೀವೂ ಸ್ವಲ್ಪ ಒಳಗಾಕ್ಕಂತೀರೇನೋ’ ತೆಪರೇಸಿ ನಕ್ಕ.

‘ಮತ್ತೆ? ಅವೆಲ್ಲ ಬಾಯಿಬಿಟ್ಟು ಹೇಳಬೇಕೇನ್ಲೆ? ಜೇನು ಬಿಚ್ಚಿದೋನು ಕೈ ನೆಕ್ಕದೆ ಇರ್ತಾನಾ?’

‘ಅದಿರ್ಲಿ, ಏನೇನ್ ಗಿಫ್ಟ್ ಕೊಡ್ತಾರೆ ಹಂಚಾಕೆ?’

‘ಮಾಮೂಲಿ... ಮಿಕ್ಸಿ, ಸೀರೆ, ಬೆಳ್ಳಿ ದೀಪ, ಬೆಳ್ಳಿ ಗಣಪ, ಕುಕ್ಕರು...’

‘ಏನು? ಕುಕ್ಕರಾ?’ ದುಬ್ಬೀರನಿಗೆ ಗಾಬರಿಯಾಯಿತು.

‘ಇದು ಆ ಕುಕ್ಕರಲ್ಲಲೆ, ಅಡುಗಿ ಮಾಡೋ ಕುಕ್ಕರು. ಎಲ್ರಿಗೂ ಗಿಫ್ಟ್ ಹಂಚಿ ಇಂಥೋರಿಗೇ ವೋಟು ಹಾಕಬೇಕು ಅಂತ ಅವರ ಮನಿದೇವರ ಮೇಲೆ ಆಣೆ ಮಾಡಿಸ್ಕಂತೀವಿ’.

‘ನೀವು ಮತದಾರರ ಮನಿದೇವ್ರ ಮೇಲೆ ಆಣಿ ಮಾಡಿಸ್ಕಂತೀರಿ ಸರಿ, ಆದ್ರೆ ನೀವು ಸರಿಯಾಗಿ ಗಿಫ್ಟ್ ಹಂಚುತೀರೋ ಇಲ್ಲೋ ಅಂತ ಕ್ಯಾಂಡೇಟ್‌ಗಳು ನಿಮ್ಮತ್ರ ಆಣಿ ಮಾಡಿಸ್ಕಳಲ್ವಾ?’ ತೆಪರೇಸಿ ಕೇಳಿದ.

‘ಮಾಡಿಸ್ಕಂತಾರೆ, ನಾವೂ ನಮ್ ಮನಿದೇವ್ರ ಮೇಲೆ ಆಣಿ ಮಾಡ್ತೀವಿ...’

‘ನಿಮ್ ಮನಿದೇವ್ರು ಯಾವುದು?’

‘ಅದನ್ನ ನಾನೇಳ್ತೀನಿ’ ಎಂದ ಗುಡ್ಡೆ.

‘ನಿಂಗೊತ್ತಾ? ಯಾವುದು?’

‘ಇನ್ಯಾವುದು? ಸುಳ್ಳು! ಸುಳ್ಳೇ ತಿಮ್ಮನ ಮನಿದೇವ್ರು!’

ಗುಡ್ಡೆ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.