ADVERTISEMENT

ಚುರುಮುರಿ | ಸುಲಿತದ ಬದುಕು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 0:00 IST
Last Updated 28 ಫೆಬ್ರುವರಿ 2023, 0:00 IST
   

ನಮ್ಮೇರಿಯಾ ಶಾಸಕರು ಮೊನ್ನೆ ತರಾತುರಿಯಲ್ಲಿ ಮಾತಿಗೆ ಸಿಕ್ಕರು. ಪಕ್ಸಗಳೆಲ್ಲಾ ಪುಗಸಟ್ಟೆ ಅಕ್ಕಿ ಕೊಡತೀವಿ ಅಂತ ಪುಂಗ್ತಿದ್ರೆ ನಮ್ಮ ಶಾಸಕರು ಏನಂತರೆ ಅಂತ ಕೇಳಿದೆ!

‘ನಾನೂವೆ ಗೆದ್ರೆ ಕ್ಷೇತ್ರದ ಜನಕ್ಕೆಲ್ಲಾ ತಲಾ 50 ಕೆ.ಜಿ. ಪುಗಸಟ್ಟೆ ಅಕ್ಕಿ ಕೊಡ್ತೀನಿ ಕನೋ!’ ಅಂತಂದ್ರು.

‘ಹೇಳಕೇನ್ಸಾ, ನೂರು ಕೆ.ಜಿ. ಅಂತ್ಲೂ ಹೇಳಬೈದು. ನಮ್ಮ ಬಾಯಿಗೆ ಈಟು ಅಂಬಲಿ ಹೂದು ನೀವು ದೊಡ್ಡೋರಾಯ್ತಿರ. ಆಮೇಲೆ ಇನ್ನೇನು ಮಾಡ್ತಿದ್ದರಿ?’

ADVERTISEMENT

‘ನನ್ನ ಕ್ಷೇತ್ರದೇಲಿ ಮತ ವಿಭಾಗ ಕೇಂದ್ರ ಸುರು ಮಾಡ್ತೀನಿ’ ಅಂದ್ರು.

‘ಅದುನ್ನ ಎಲ್ಲಾರೂ ಮಾಡ್ತರೆ ನಿಮ್ಮದೇನು ದೊಡ್ಡಸ್ಥಿಕೆ’.

‘ಲೇ ದಡ್ಡ, ಮತ ಅಂದ್ರೇನ್ಲಾ ಜಾತಿ ಅಂತಲ್ಲವಾ? ಉದ್ದ ಗೀಟಿನವು ಅಡ್ಡ ಗೀಟಿನವು ಎಷ್ಟವೆ, ಕರೀವೆಷ್ಟು ಬಿಳೀವೆಷ್ಟು ಅದರಲ್ಲಿ ನಮ್ಮವು ಎಷ್ಟು ಅಂತ ತಿಳಕಣದೇ ಮತ ವಿಬಾಗ ಕನೋ!’

‘ಆಮೇಲೆ ಸಾ?’ ಆಶ್ಚರ್ಯದೇಲಿ ಕೇಳಿದೆ.

‘ಮತ ಖರೀದಿ ಕೇಂದ್ರ ಒಂದಿರತದೆ. ನಮ್ಮ ಪಕ್ಸದವಾದ್ರೆ ಅವುಕ್ಕೆ ಕುಕ್ಕರ್‍ರೋ ನಿಕ್ಕರ್‍ರೋ ಕೊಟ್ಟು ಕಳುಗುಸ್ತೀವಿ. ನಮಗೆ ಬರದೇ ಇರೋ ಮತಗಳ ಎಪ್ಪೆಸ್ ಮಾಡ್ತೀವಿ ಇಲ್ಲಾ ಅಡ್ಡ ಮಾತಾಡಿ ಮತಗಳ ಒಡೀತೀವಿ!’

‘ಆಮೇಲೆ’ ಅಂದೆ.

‘ಪಾನೀಕರಿಗೆ ದಿನಾ ಸಂದೆನಾಗ ಫ್ರೀ ತೀರ್ಥ, ಪ್ರಸಾದ, ತಟ್ಟೇ ಕಾಸು ವಿತರಣೆ ಇರತದೆ. ಈ ಮತಮ್ಯಾಟಿಕ್ಸ್ ನಿನಗೆ ಅರ್ಥಾಗಕುಲ್ಲ ಕನೋ!’ ಅಂದ್ರು ನಾಯಕರು.

‘ಸಾ, ಇವೆಲ್ಲಾ ವಿದಾನಸೌಧಕ್ಕೆ ಹೋಗಕೆ ಮೇನ್ ರೋಡ್ ಬುಟ್ಟು ಅಡ್ಡರಸ್ತೇಲಿ ಹೋಗಕ್ಕೆ ಮಾಡಿಕ್ಯಂಡಿರಾ ಪರ್ಮನೆಂಟ್ ಡಿವಿಯೇಶನ್ನು
ಗಳು!’ ಅಂದೆ.

‘ನಾವೂ ಬದುಕಬೇಕಲ್ಲೋ?’ ಅಂದ್ರು.

‘ಸಾ, ನೀವು ವೋಟ್ ಪೆಡ್ಲರ್ ಇದ್ದಂಗೆ. ಡಾನ್ ಎಲ್ಲೋ ಇರತನೆ. ಗೆದ್ದ ಮ್ಯಾಲೆ ನೀವು ನಮ್ಮನ್ನ ಸುಲಿದು ಸೂಚ್ಯಂಕ ಹೆಚ್ಚಿಸಿಗ್ಯಂಡು ಅಭಿವೃದ್ಧಿ ಆಯ್ತೀರಿ’ ಅಂತ ತಿವಿದ್ರೂ ನಾಯಕರು ಮಿಸುಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.