
ಚುರುಮುರಿ
ಹೊಸ ವರ್ಷದ ಸಂಭ್ರಮಾಚರಣೆಯ ವರದಿ ಮಾಡಿ ಸುಸ್ತಾಗಿ ಮಲಗಿದ್ದ ಟೀವಿ ಪತ್ರಕರ್ತ ತೆಪರೇಸಿಗೆ ಕನಸಲ್ಲಿ ದೇವರು ಪ್ರತ್ಯಕ್ಷನಾಗಿ, ‘ಅಯ್ಯಾ ತೆಪರೇಸಿ, ಹೊಸ ವರ್ಷದಲ್ಲಿ ನಿನಗೇನು ವರ ಬೇಕು ಕೇಳಿಕೋ’ ಎಂದಿತು.
‘ನನಗೇನೂ ಬೇಡ ತಂದೆ, ದಿನಾ ಟೀವೀಲಿ ಹೇಳಿದ್ದೇ ಹೇಳಿ ಸಾಕಾಗಿದೆ. ಈ ಸಿಎಂ ಕುರ್ಚಿ ಸಮಸ್ಯೆ ಯಾವಾಗ ಬಗೆಹರಿಸ್ತೀಯ? ವಿಜಯೇಂದ್ರ, ಯತ್ನಾಳ್ ಸಾಹೇಬ್ರನ್ನ ಯಾವಾಗ ಒಂದು ಮಾಡ್ತೀಯ? ರಷ್ಯಾ–ಉಕ್ರೇನ್ ಯುದ್ಧ ಯಾವಾಗ ನಿಲ್ಲಿಸ್ತೀಯ?’ ಎಂದು ಕೇಳಿದ ತೆಪರೇಸಿ.
‘ಜಗಳ ಬಗೆಹರಿಸೋಕೆ, ಯುದ್ಧ ನಿಲ್ಸೋಕೆ ನಾನು ಟ್ರಂಪ್ ಅಲ್ಲ, ಬೇರೇನಾದ್ರು ಕೇಳು...’
‘ಆಯ್ತು, ಈ ಮತ ಚೋರಿ ಆಗಿರೋದು ನಿಜಾನಾ?’
‘ಗೊತ್ತಿಲ್ಲ...’
‘ಡಿಕೆಶಿ ಸಾಹೇಬ್ರಿಗೆ ಎಷ್ಟು ದೇವರ ಬೆಂಬಲ ಇದೆ?’
‘ಗೊತ್ತಿಲ್ಲ...’
‘ಸಂಪುಟ ವಿಸ್ತರಣೆ ಯಾವಾಗ ಆಗಬಹುದು?’
‘ಗೊತ್ತಿಲ್ಲ...’
‘ಈ ರಾಜಕಾರಣಿಗಳು ಈಗ ಹೇಳಿದ್ದನ್ನ ಸ್ವಲ್ಪ ಹೊತ್ತಿಗೆ ನಾನಂಗೆ ಹೇಳೇ ಇಲ್ಲ, ನನ್ನ ಹೇಳಿಕೆ ತಿರುಚಿದಾರೆ ಅಂದುಬಿಡ್ತಾರೆ. ಅವರ ಮಾತಿನ ಒಳಾರ್ಥ, ಗೂಢಾರ್ಥ ತಿಳಿಯೋದು ಹೇಗೆ?’ ಎಂದು ತೆಪರೇಸಿ ಐನಾತಿ ಪ್ರಶ್ನೆ ಕೇಳಿದ.
‘ಅದು ನಿನಗಲ್ಲ, ನನಗೂ ಗೊತ್ತಾಗಲ್ಲ...’ ದೇವರು ಮಾರ್ಮಿಕವಾಗಿ ನಕ್ಕಿತು.
‘ಏನ್ ಕೇಳಿದ್ರೂ ಗೊತ್ತಿಲ್ಲ ಅಂತೀಯ. ಸರಿ, ನನ್ನ ಸ್ವಂತಕ್ಕೊಂದು ಮನೆ ಬೇಕು, ಕೊಡಿಸ್ತೀಯ?’ ತೆಪರೇಸಿ ಬೇಡಿಕೆ ಇಟ್ಟ.
‘ತಥಾಸ್ತು... ಮನೆ ಅರ್ಜೆಂಟ್ ಬೇಕಾ, ನಿಧಾನಕ್ಕಾದ್ರೂ ನಡೆಯುತ್ತಾ?’
‘ಅಂದ್ರೆ? ಏನ್ ನಿನ್ ಮಾತಿನ ಅರ್ಥ?’
‘ಅರ್ಜೆಂಟ್ ಬೇಕಾದ್ರೆ ಕೇಸಿಎಂ ಹತ್ರ ಹೋಗು, ಫಟ್ ಅಂತ ಸಿಗುತ್ತೆ...’
‘ನಂಗೆ ಡಿಸಿಎಂ ಗೊತ್ತು, ಇದ್ಯಾರು ಕೇಸಿಎಂ?’
‘ಕೇರಳ ಸಿಎಂ ಕಣಯ್ಯ, ದಡ್ಡ...’
ತೆಪರೇಸಿಗೆ ಫಕ್ಕನೆ ಎಚ್ಚರವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.