ADVERTISEMENT

ಸಾಕುಪ್ರಜ್ಞೆ ಚೇಳುಕಾ!

ಚಂದ್ರಕಾಂತ ವಡ್ಡು
Published 9 ಸೆಪ್ಟೆಂಬರ್ 2020, 19:30 IST
Last Updated 9 ಸೆಪ್ಟೆಂಬರ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ನಮ್ಮಲ್ಲಿ ಮಾತ್ರ’ ಎಂದು ಎಲ್ಲಾ ವಾಹಿನಿಗಳಲ್ಲಿ ಏಕಕಾಲಕ್ಕೆ ಬ್ರೇಕ್ ಆಗುತ್ತಿತ್ತು ಡ್ರಗ್ಸ್ ಕಥಾನಕ. ಅದೇ ಗುಂಗಿನಲ್ಲಿ ತೇಲಾಡುತ್ತಿದ್ದ ತಿಂಗಳೇಶನಿಗೆ ಮೊಬೈಲ್ ಕರೆ:

‘ನಮಸ್ಕಾರ ಸಾರ್, ನಾನು ಮೈಸೂರಿನ ಚೇಳುಕಾ ಮಾತಾಡ್ತಿದ್ದೀನಿ...’
ಬೆಚ್ಚಿಬಿದ್ದ ತಿಂಗಳೇಶ ಕೇಳಿದ ‘ಕರಿ ಚೇಳುಕಾನಾ, ಬಿಳಿ ಚೇಳುಕಾನಾ?!’

‘ಏನ್ಸಾ… ತಮಾಸೆ ಮಾಡ್ತೀರಿ! ನಾನು ಚೇಳುಕಾರಾಧ್ಯ. ನಿಮಗೆ ಗೊತ್ತಲ್ಲ, ಚಾಮುಂಡಿಬೆಟ್ಟದ ಕೆಳಗಿನ ಸಾಕ್ಷಿಪ್ರಜ್ಞೆ… ನಾನು ಅವರ ಶಿಷ್ಯ. ಗುರುಗಳು ಹೇಳಿದವರಿಗೆಲ್ಲಾ ಕುಟುಕುವುದೇ ನನ್ನ ಕಾಯಕ. ನನ್ನನ್ನು ಸಾಕುಪ್ರಜ್ಞೆ ಎಂತಲೂ ಗುರುತಿಸುತ್ತಾರೆ’.

ADVERTISEMENT

‘ಅದೇನೋಪಾ… ನಿನ್ನ ಪರಿಚಯ ನನ್ನ ಪ್ರಜ್ಞೆಗೆ ನಿಲುಕುತ್ತಿಲ್ಲ…!’

‘ಸಾರ್, ನಾನೂ ಮೀಡಿಯಾ ಪರ್ಸನ್ನು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಯಾಕ್ಟಿವ್. ಅಲ್ಲದೆ ಫೇಸ್ಬುಕ್ ವಿಮರ್ಶಕನಾಗಿ ವರ್ಲ್ಡ್‌ ಫೇಮಸ್. ಬೆಂಗಳೂರಿನ ಎಲ್ಲಾ ಸಾಂಸ್ಕೃತಿಕ ವಲಯವೂ ನನಗೆ ಗೊತ್ತು ಸಾರ್‌. ಬಿರಿಯಾನಿ ಸಾಹಿತಿ, ಒಬ್ಬಟ್ಟು ವಿಮರ್ಶಕ, ಟೀಕಾಫಿ ಪತ್ರಕರ್ತ, ಪಬ್ ಪ್ರಕಾಶಕ… ಎಲ್ಲರೂ ಪರಿಚಿತರು. ರಾತ್ರಿ ಹತ್ತು ಗಂಟೆಗೆ ಹೋದ್ರೂ ಸತ್ಕರಿಸುತ್ತಾರೆ. ಒಮ್ಮೆ ಫೇಸ್ಬುಕ್ ನೋಡಿ... ಎಷ್ಟೊಂದು ಗಣ್ಯರೊಂದಿಗೆ ನನ್ನ ಸೆಲ್ಫಿ ಇವೆ. ಪಾಪ ನೀವು ಫೇಸ್ಬುಕ್ಕಿನಲ್ಲಿ ಇಲ್ಲ ಅಂತ ಕಾಣ್ತದೆ…’

ಚೇಳುಕನ ಕನಿಕರದ ದನಿ ಮತ್ತು ಖ್ಯಾತಿ ತಿಂಗಳೇಶನಲ್ಲಿ ಕೀಳರಿಮೆ ಹುಟ್ಟಿಸಿತು.‌

‘ಸರಿಯಪ್ಪಾ… ಈಗ ನನ್ನಿಂದ ಏನಾಗಬೇಕಿತ್ತು?’

‘ಏನಿಲ್ಲ ಸಾರ್… ಇಲ್ಲೇ ನಿಮ್ಮ ಬಡಾವಣೆಯಲ್ಲೇ ಇದ್ದೆ. ನಿಮ್ಮ ಜೊತೆ ಒಂದು ಫೋಟೊ ತೆಗೆಸಿಕೊಳ್ಳೋಣ ಅಂತ…’

ಅದೇ ಸಮಯಕ್ಕೆ ಸಿನಿಮಾದವರು, ರಾಜಕಾರಣಿಗಳ ಜೊತೆಗಿನ ಡ್ರಗ್ಸ್‌ ಮಾಫಿಯಾ ಸಂಪರ್ಕ ಸಾಬೀತುಪಡಿಸಲು ಹಳೆಯ ಫೇಸ್ಬುಕ್ ಫೋಟೊಗಳನ್ನು ಬಿತ್ತರಿಸುತ್ತಿದ್ದವು ಸುದ್ದಿವಾಹಿನಿಗಳು! ಎಚ್ಚರಗೊಂಡ ತಿಂಗಳೇಶ ಕೊಂಡಿ ತುಂಡರಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.