ADVERTISEMENT

ಚುರುಮುರಿ: ರಾಜಕೀಯದ ಬೇಳೆ

ಲಿಂಗರಾಜು ಡಿ.ಎಸ್
Published 3 ಅಕ್ಟೋಬರ್ 2023, 1:59 IST
Last Updated 3 ಅಕ್ಟೋಬರ್ 2023, 1:59 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

‘ನಿಮ್ಮ ರಾಜಕೀಯದ ಬೇಳೆ ಬೇಯಿಸಬ್ಯಾಡಿ ಅಂತ ಪರಮಣ್ಣ ಅಂದದಲ್ಲಾ, ಇದ್ಯಾವುದ್ಲಾ ರಾಜಕೀಯದ ಬೇಳೆ!’ ಅಂತ ಯಂಟಪ್ಪಣ್ಣ ಸೋಜುಗಪಟ್ಟಿತು.

‘ರಾಜಕೀಯದ ಬೇಳೆ ಜನಕ್ಕೆ ಉಪಯೋಗಕ್ಕೆ ಬರಲ್ಲ ಕನಣೈ. ರಾಜಕೀಯದೋರು ಅವರ ತೆವಲಿಗೋಸ್ಕರ ಈ ಬೇಳೆ ಬೇಯಿಸ್ತರೆ!’ ಅಂದ್ರು ತುರೇಮಣೆ.

ADVERTISEMENT

‘ಒಂದೆರಡು ಉದಾಹರಣೆ ಹೇಳ್ಲಾ!’ ಅಂತು ಯಂಟಪ್ಪಣ್ಣ.

‘ನೋಡಣೈ, ವರ್ಸದ ಹಿಂದೆ ಮೇಕೆದಾಟು ಯೋಜನೆ ಮಾಡಲೇಬೇಕು ಅಂತ ತೊಡೆ ತಟ್ಟಿ ಬೇಳೆ ಬೇಯಿಸ್ಕಂದರು. ಈಗ ಕಾವೇರಿ ಹೆಸರಲ್ಲಿ ಮೂರೂ ಪಕ್ಸಗಳು ತಮ್ಮ ರಾಜಕೀಯದ ಬೇಳೆ ಬೇಯೋಕೆ ಇಟ್ಟವೆ’ ತುರೇಮಣೆ ಉದಾಹರಣೆ ಕೊಟ್ಟರು.

‘ನಮ್ಮದು ಡಬಲ್ ಎಂಜಿನ್ ಸರ್ಕಾರ ಅಂತ ಕಮಲದವು ಅಂತಿದ್ವಲ್ಲ, ಅದೂವೆ ರಾಜಕೀಯದ ಬೇಳೆ ಅಂತೀರ?’ ಅಂದ ಚಂದ್ರು.

‘ಹ್ಞೂಂ ಕಯ್ಯಾ, ಜನದ ಮುಂದೆ ಇವರ ಬೇಳೆ ಬೇಯಲಿಲ್ಲ. ಅದುಕ್ಕೇ ಈಗ ಕುಮಾರಣ್ಣನ್ನ ಬೇಳೆ ಬೇಯಿಸಕ್ಕೆ ಬುಟ್ಟವ್ರೆ!’ ಅಂದರು ತುರೇಮಣೆ.

‘ಈಗೇನು ಜಾತಿ ಬೇಳೆ, ಡಿಸಿಎಂ ಬೇಳೆ, ಮೈತ್ರಿ ಬೇಳೆ, ಬಂಡಾಯದ ಬೇಳೆ, ಲಂಚದ ಬೇಳೆ, ಡ್ರಗ್ಸ್ ಬೇಳೆ, ಪರ್ಸೆಂಟೇಜ್ ಬೇಳೆ, ಹಿಂಸಾಚಾರದ ಬೇಳೆ ಅಂತೆಲ್ಲಾ ಸ್ಯಾನೆ ಬ್ರಾಂಡವೆ. ಆದರೆ ಗಾಂಧಿ ಬ್ರಾಂಡ್ ಬೇಳೆ ಮಾತ್ರ ಯಾರಿಗೂ ಬೇಕಾಗಿಲ್ಲ!’ ಅಂದೆ ನಾನು.

‘ರಾಜಕೀಯದ ಬೇಳೆ ಬೀಜ ಎಲ್ಲಿ ಸಿಕ್ತದೋ?’ ಯಂಟಪ್ಪಣ್ಣ ಕೇಳಿತು.

‘ಅಣೈ ಇದು ಸೀಡ್‍ಲೆಸ್ ಬೇಳೆ! ರಾಜಕೀಯದ ಪಡಸಾಲೇಲಿ ಕೈಯಲ್ಲಿ ನಾಟಿ ಮಾಡಿ, ಕಮಲ ಬ್ರಾಂಡ್ ಗೊಬ್ಬರ ಹಾಕಿ, ತೆನೆ ಕೂದು ಜನದ ಬೆನ್ನ ಮ್ಯಾಲೆ ಕಣ ಮಾಡ್ತರೆ’ ತುರೇಮಣೆ ವಿವರಿಸಿದರು.

‘ರಾಜಕೀಯದ ಬೇಳೆ ಬೇಯಿಸೋ ಐನ್ ಗಿರಾಕಿ ಯಾರ್‍ಲಾ?’ ಯಂಟಪ್ಪಣ್ಣ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿತು.

‘ಲೋಪಸಭೆ ಎಲೆಕ್ಷನ್ ಗೇಮಲ್ಲಿ ರಾಜಕೀಯದ ಬೇಳೆ ಬೇಯ್ಸೋ ಮೇಳ ನಡಿತದಲ್ಲ ಆಗ ನಿಮಗೇ ಅರ್ಥಾತದೆ!’ ತುರೇಮಣೆ ವಡಪು ಹಾಕಿ ತಲೆಕೆಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.