
‘ಒಂದೊಂದ್ ಕಿತ ಏನೆಲ್ಲಾ ಪಂಪು ವಡ್ದು, ಆನಿವರ್ ಮಾರ್ಚ್ ಗೆಟ್ ಸೆಟ್ ಗೋ... ಅಂದ್ರೂ ಮುಂದಕ್ಕೇ ಓಗಕಿಲ್ಲ ಕಣ್ಲಾ’ ಎಂದು ಸಿಬಿರೆಬ್ಬಿದ ಗುದ್ಲಿಂಗ.
‘ಊ ಕಣ್ಲಾ, ಇಂಡಿಗೊ ತರ ಆರಾಡಲ್ಲ ಅಂತ ಹಟ ಇಡಿದು ಬಂಡೆ ಅಂಗೆ ಜಪ್ಪಯ್ಯ ಅಂದ್ರೂ ಅಲ್ಲಾಡ್ದೆ ಕುಂತ್ ಬಿಡ್ತದೆ’ ಎಂದ ಮಾಲಿಂಗ.
‘ಕೈ ಕತೆ ಅಂಗೇ ಆಗದೆ. ರಾಜೀವಣ್ಣನೇ ಪೈಲಟ್ ಆದ್ರೂ ರಾಹುಲ್ ಇಮಾನ ಎಲ್ಲಾ ಕಡೆ ಪಲ್ಟಿ ಒಡ್ದು ಇಂಡಿ–ಗೋ ಅನ್ನೋ ಅಂಗಾಗದೆ’.
‘ಆರ‍್ದೇ ಇರೋ ಇಮಾನಗಳು ಏರ್‌ಪೋರ್ಟಲ್ಲೆಲ್ಲಾ ನಿಂತ್ಕಂಡ್ರೆ ಶಾನೆ ತೊಂದ್ರೆ ಆಯ್ತದೆ. ಅವನ್ನ ಸ್ಪೇಸ್‌ಸ್ಟೇಷನ್ನಲ್ಲೇ ನಿಲ್ಲೊ ಅಂಗ್ ಮಾಡ್ಬೇಕು’.
‘ರಾಕೆಟ್ಗಳ್ಗೆ ಇದ್ದಂಗೇ ಪಕ್ಷಗಳಿಗೂ ಒಂದು ಸ್ಪೇಸ್‌ಸ್ಟೇಷನ್ ಬೇಕಾಯ್ತದೆ. ಆರಾಡ್ದೇ ಕೆಟ್ ಗುಜರಿ ಇಡ್ದೋವಕ್ಕೆ ನೆಲೆ ಅಂತ ಬೇಕಾಯ್ತದಲ್ಲ...’
‘ವೂ, ಅದೇ ಲಾಂಚಿಂಗು, ಲಂಚಿಂಗು, ಲ್ಯಾಂಡಿಂಗು, ಫಂಡಿಂಗು ಸ್ಟೇಷನ್’.
‘ಕೈ ಪಾಲಿಗೆ ಕರುನಾಡೇ ಕರ್ಮಭೂಮಿ. ಇಂತಾ ಕಡೆನೇ ಇಮಾನ ರಿಪೇರಿ ಮಾಡ್ದೆ ಬುಟ್ಕಂಡ್ ಬತ್ತಾವ್ರಲ್ಲ ಅಂತ’ ಮಾಲಿಂಗ ವಿಷಾದದಿಂದ ಹೇಳಿದ.
‘ಊ ಕಣ್ಲಾ, ಇಂಡಿಗೊ ಫ್ಲೈಟ್ ಸರಿಯಾಯ್ತದೆ, ಆದ್ರೆ ಈ ರಾಜಕೀಯದೋರ ಈಗೋ ಫೈಟ್ ಮುಗಿಯಕ್ಕಿಲ್ಲ. ಕುದ್ರೆ ಯಾಪಾರ ಸುರುವಾದ್ರೆ ‘ಹಿಂದೆ–ಗೋ’, ‘ಹಿಂಡಿ–ಗೋ’, ‘ಹುಂಡಿ–ಗೋ!’ ಕುದುರೆಗಳು ಅಶ್ವಮೇಧ ಅಂತ ಸಿಕ್‌ಸಿಕ್ ಕಡೆ ಡಿನ್ನರ್ ಮೇಯಕ್ ಶುರುಮಾಡ್ತವೆ’ ಎಂದು ಗುದ್ಲಿಂಗ ತನ್ನ ರಾಜಕೀಯ ಜ್ಞಾನ ಪ್ರದರ್ಶಿಸಿದ.
‘ಸಾರಥಿ ಗಟ್ಟಿಮುಟ್ಟಾಗವ್ರೆ, ಕಿಂಗ್ ಈಸ್ ಅಲೈವ್ ಅಂತ ಭೈರತಿ ಅಣ್ಣೋರು ಯೋಳಿಲ್ವಾ?’
‘ಅದು ಮುಖ್ಯ ಅಲ್ಲ ಕಣ್ಲಾ, ‘ಕ್ವೀನ್ ಡಸ್ ನಾಟ್ ಲೀವ್’ ಅದು ಮುಖ್ಯ. ಹೈಕಮಾಂಡ್ ಮೇಡಮ್ ಬಿಟ್‌ಕೊಡ್ದೇ ಇರೋಗಂಟ ರಾಜಂಗೆ ಎಷ್ಟು ಚೆಕ್‌ಮೇಟ್ ಆಕುದ್ರೂ ಪ್ರಯೋಜನ ಇಲ್ಲ ಕಣ್ರಲಾ’ ಎಂದು ಪರ‍್ಮೇಶಿ ಕಟುಸತ್ಯ ಹೇಳುವವನಂತೆ ಮುಗುಳ್ನಕ್ಕ .
ಪರ‍್ಮೇಶಿಯ ನಗೆಯನ್ನು ಅನುಮೋದಿಸುವಂತೆ ಎಲ್ಲರೂ ಹೌದೌದು ಎಂದು ತಲೆಯಾಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.