ADVERTISEMENT

ಲೋಪಸಂಧಿ

ಲಿಂಗರಾಜು ಡಿ.ಎಸ್
Published 24 ಜೂನ್ 2019, 19:45 IST
Last Updated 24 ಜೂನ್ 2019, 19:45 IST
   

‘ಇದೇನ್ಸಾರ್ ಈ ಕೆಪಿಎಸ್‍ಸಿ ಹಗರಣ ಮುಗಿಯಂಗಿಲ್ಲವಲ್ಲಾ!’ ಅಂದೆ ನಾನು. ‘ನೋಡೋ ಕೆಪಿಎಸ್‍ಸಿದು ಪಂಚವಾರ್ಷಿಕ ಯೋಜನೆ. ಅದು ಮಾಡೋ ಲೋಪದಿಂದ ಒಂದು ಲಿಸ್ಟ್ ಈಚೆಗೆ ಬರಕ್ಕೆ ಕನಿಷ್ಠ 5 ವರ್ಷ ಬೇಕು’ ಅಂದ್ರು ತುರೇಮಣೆ. ‘ಸಾರ್ ನೀವೂ ಕೆಎಎಸ್ ಮಾಡಿದ್ದೀರಲ್ಲ, ಕೆಪಿಎಸ್‍ಸಿ ಬಗ್ಗೆ ನಿಮ್ಮ ಅನುಭವ ಹೇಳಿ ಸಾರ್’ ಅಂದೆ.

‘ನೋಡ್ಲಾ ಕೆಪಿಎಸ್‍ಸಿ ಕೋಡೆಡ್ ಪರೀಕ್ಷೆಲಿ ಯಾರೂ ಹೆಸರು, ಗುರುತು ಬರೆಯಂಗಿಲ್ಲ. ನಮ್ಮ ಕಾಲದಲ್ಲಿ ಒಬ್ಬ ಎಲ್ಲಾ ಸಬ್ಜೆಕ್ಟಿನ ಮೊದಲನೇ ಉತ್ತರದ ಮೊದಲ ಸಾಲನ್ನು ‘ಇತಿಹಾಸದ ಪುಟಪುಟಗಳನ್ನು ಪಟಪಟನೆ ತಿರುವಿ ನೋಡಿದಾಗ’ ಅಂತಲೇ ಆರಂಭಿಸ್ತಿದ್ದ. ಈ ಲೋಪ ಯಾರಿಗೂ ಗೊತ್ತಾಗಲಿಲ್ಲ. ಆಮೇಲೆ ಪೇಪರ್ ಹುಡುಕಿ ಮಾರ್ಕ್ಸ್‌ ಹಾಕಿಸಿಕಂಡ. ಕೋರ್ಟಿಂದ ದಿನಾ ಉಗಿಸಿಕಂಡರೂ ಒರೆಸಿಕೊಂಡು ಲೋಪ ಮಾಡ್ತಲೇ ಇರೋ ಲೋಕಸೇವಾ ಆಯೋಗದ ಹೆಸರನ್ನ ಕರ್ನಾಟಕ ಲೋಪಸೇವಾ ಆಯೋಗ ಅಂತ ಬದಲಾಯಿಸಬೇಕು’ ಅಂದರು ತುರೇಮಣೆ.

‘ಬುಡಿ ಸಾರ್, ಲೋಪ ರಾಜಕೀಯದಲ್ಲೂ ಅದಲ್ಲಾ. ಅಮೃತ ಕುಡಿತಾ ಇರೋ ಕಾಂಗ್ರೆಸ್ಸಿನವರದ್ದೇ ಲೋಪ ಅಂತ ಜೆಡಿಎಸ್ ಅಂದರೆ, ಮೈತ್ರಿ ಮಾಡಿಕೊಂಡಿದ್ದೇ ನಮ್ಮ ಲೋಪ ಅಂತ ವೇರಪ್ಪನೋರ ನೋವು. ಸಂಧಿಕಾರ್ಯ
ದಲ್ಲಿ ಸ್ವರಗಳು ಲೋಪವಾಗಬೇಕು, ನಿಮ್ಮಲ್ಲಿ ಅದಾಯ್ತಾ ಇಲ್ಲ. ಮೊದಲು ಅವನ್ನ ಲೋಪ ಮಾಡಿ, ಇಲ್ಲದಿದ್ರೆ ಗೊತ್ತಲ್ಲಾ ಅಂತ ದೊಡ್ಡಗೌಡ್ರು ಚುನಾವಣೆ ಬಾಂಬು ಹಾಕವರೆ. ಅದ್ಯಾಕೆ ಹಿಂಗೆ ಮಾತಾಡಿರಿ ಬುಡ್ತು ಅನ್ನಿ. ನಮ್ಮ ಲೋಪಗಳು ಅರ್ಥಕ್ಕೆ ಬಾಧೆಯಾಗದಿದ್ರೆ ಲೋಪವಾಯ್ತವೆ ಅಂತ ಸಿದ್ದಣ್ಣ ಶಬ್ದಮಣಿದರ್ಪಣ ಮಾಡ್ತಾವರೆ. ಯಡೂರಪ್ಪಾಜಿ ಬೇರೆ ಸರ್ಕಾರ ಲೋಪವಾಗಿ ಸಿಎಂ ಪೋಸ್ಟು ಆಗಮವಾಗಲಿ ಅಂತ ಲೋಪಾಮುದ್ರೆ ಹಾಕಿ ಕುಂತವರೆ’ ಅಂದೆ ನಾನು.

ADVERTISEMENT

‘ರಾಗಣ್ಣ ದೊಡ್ಡಗೌಡ್ರಿಗೆ ಲೋಪಗಳ ಸಂಧಿದೋಷವನ್ನು ನೀವೇ ಸರಿ ಮಾಡ್ಕಬೇಕು ದೊಡ್ಡಪ್ಪಾ ಅಂದವರಂತೆ!’ ಅಂದ್ರು ತುರೇಮಣೆ.

‘ಸಾರ್ ಲೋಪವಾಗದ ಸ್ವರಗಳನ್ನ ಏನಂತ ಕರೀಬಹುದು?’ ಅಂತ ನಾನು ಕೇಳಿದ್ದಕ್ಕೆ ತುರೇಮಣೆ ಸಿಟ್ಟಲ್ಲಿ ಬೈದೇಬುಟ್ರು ‘ಬಾಯಿ ಮುಚ್ಚು ಲೋಫರ್!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.