ADVERTISEMENT

ಚುರುಮುರಿ: ಕಾಲ್ಚೆಂಡಿನ ಲೀಲೆ

Published 8 ಡಿಸೆಂಬರ್ 2022, 20:13 IST
Last Updated 8 ಡಿಸೆಂಬರ್ 2022, 20:13 IST
ಚುರುಮುರಿ
ಚುರುಮುರಿ   

‘ಗೋಲು ಹೊಡೆದಂತೆ ಮರಡೋನಾ; ಮನೆಯ ಕಡೆ ನಾವು ಹೊರಡೋಣಾ’.

‘ಫುಟ್ಬಾಲ್ ಮೇಲೂ ಕವನಾನ?’

‘ನಂದಲ್ಲಾ... ವೈ.ಎನ್.ಕೆ. ಅವರ ಸಾಲು! ಕೈಲಾಸಂ ಕೂಡಾ ಒಳ್ಳೆ ಫುಟ್ಬಾಲ್ ಪಟು. ಲಂಡನ್‌
ನಲ್ಲಿದ್ದಾಗ ಅಲ್ಲಿನ ಫುಟ್ಬಾಲ್ ಟೀಮ್ನಲ್ಲಿ ‘ಲೆಫ್ಟ್-ಔಟ್’ ಆಟಗಾರನಾಗಿದ್ದರಂತೆ. ಆಸಕ್ತಿ ಕಡಿಮೆ ಯಾಗಿ ಆಟಕ್ಕೆ ಹೋಗದೆಯಿದ್ದಾಗ ಟೀಮ್‌ನವರು ಇವರನ್ನ ‘ಲೆಫ್ಟ್-ಔಟ್’ ಮಾಡ್ಬಿಟ್ಟರಂತೆ!’

ADVERTISEMENT

‘ನಿಮ್ಮ ಕೈಲಾಸಂ ಬಿಡಿ, ಕೈಗೊಂದು ಜೋಕು, ಕಾಲಿಗೊಂದು ಜೋಕು... ತಗೊಳ್ಳಿ ತಿಂಡೀನ’.

‘ಏನೇ ಇದು?! ನಿನಗೂ ಫುಟ್ಬಾಲ್‌ ಫೀವರ್‍ರಾ?! ಇಡ್ಲಿ ಫುಟ್ಬಾಲ್ ಥರಾನೇ ಕಾಣ್ತಿದೆ?’

‘ಹೌದುರೀ, ಪ್ರಪಂಚದ ತುಂಬೆಲ್ಲ ಫುಟ್ಬಾಲ್ ಸುತ್ತಾಡ್ತಿರೋವಾಗ ನಾವೂ ನಮ್ಮ ಕೈಚಳಕ ತೋರ್ಸಲೇಬೇಕಲ್ಲವಾ? ಮೊನ್ನೆ ಪೇಪರಲ್ಲಿ ಹೊಸ ರುಚಿ ಅಂಕಣದಲ್ಲಿ ನೋಡಿದೆ’.

‘ಅದಕ್ಕೆ... ನಮ್ಮ ಮೇಲೆ ಪ್ರಯೋಗವೋ?! ತಪ್ಪು ನಿಂದಲ್ಲ ಬಿಡು, ಫುಟ್ಬಾಲ್‌ದು. ಫುಟ್ಬಾಲ್ ಬ್ಯಾಗು, ಫುಟ್ಬಾಲ್ ಶರ್ಟು ಅಂತ ತಲೆ ತುಂಬಾ ಅದನ್ನೇ ತುಂಬಿಕೊಂಡು ಹೇರ್ ಕಟ್‌ಗೂ ಫುಟ್ಬಾಲ್ ಡಿಸೈನೇ ಬಂದ್ಬಿಟ್ಟಿದೆ!’

‘ದೋಹಾದಲ್ಲಿನ ಈ ಫುಟ್ಬಾಲ್ ದಾಹ ವಿಪರೀತ, ಫೈನಲ್ಸ್ ಟಿಕೆಟ್ ಬೆಲೆ ಲಕ್ಷ ದಾಟಿದೆಯಂತೆ ರೀ’.

‘ಐದು ವರ್ಷಕ್ಕೊಮ್ಮೆ ನಡೆಯೋ ಅಸೆಂಬ್ಲಿ ಟಿಕೆಟ್‌ಗೆ ಬರೀ ಅರ್ಜಿ ಸಲ್ಲಿಸುವುದಕ್ಕೇ ಎರಡು ಲಕ್ಷ, ಇನ್ನು ನಾಲ್ಕು ವರ್ಷಕ್ಕೊಮ್ಮೆ ನಡೆಯೋ ಫುಟ್ಬಾಲ್‌ಗೆ ಲಕ್ಷ ಜಾಸ್ತಿಯೇನಲ್ಲ ಬಿಡು’.

‘ಬ್ರೆಜಿಲ್ಲೋ ಅರ್ಜೆಂಟೀನಾನೋ ಯಾರೋ ಹೊಡ್ಕೋತಾರೆ ಬಿಡಿ ವರ್ಲ್ಡ್ ಕಪ್, ನಾವಲ್ಲವಲ್ಲ?

‘ಆದರೆ ನಮ್ಮಲ್ಲೂ ವರ್ಲ್ಡ್‌ಕಪ್ ಗುಂಗು ಕಡಿಮೆಯೇನಿಲ್ಲ. ಕೇರಳದಲ್ಲಿ ಎರಡು ಟೀಮಿನ ಅಭಿಮಾನಿಗಳು ಕಿತ್ತಾಡಿಕೊಂಡು ಒದೆ
ತಿಂದ್ಕೊಂಡಿದಾರಂತಲ್ಲ. ಅದೇ ಒದೆ
ಫುಟ್ಬಾಲ್‌ಗೆ ಕೊಡೋದು ಕಲಿತುಕೊಂಡ್ರೆ, ಫ್ರೀ-ಕಿಕ್ ಸಿಕ್ಕು, ‘ಸ್ಟಾಪ್ ನಾಟ್ ಟಿಲ್ ದ ಗೋಲ್ ಈಸ್ ರೀಚ್ಡ್’ ಅಂದುಕೊಂಡಿದ್ರೆ, ನಮ್ಮವರೇ ಚಾಂಪಿಯನ್ ಆಗ್ತಿದ್ರೇನೋ. ಎಲ್ಲಾ, ಕಾಲ
ಲೀಲೆ’

‘ಕಾಲ್ಚೆಂಡಿನ ಲೀಲೆ ಎಂದೇ ಹೇಳಬೇಕು ಆ ಕ್ರೀಡಾಪಟು... ಪೆಲೆ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.