ADVERTISEMENT

ಚುರುಮುರಿ: ಬಡಾಯಿ ಬಂಡಾಯ 

ಗುರು ಪಿ.ಎಸ್‌
Published 3 ಏಪ್ರಿಲ್ 2024, 23:50 IST
Last Updated 3 ಏಪ್ರಿಲ್ 2024, 23:50 IST
   

‘ನಾನು ಬಂಡಾಯ ಅಭ್ಯರ್ಥಿಯಾಗಿ ನಿಲ್ತೀನಿ’ ದೃಢವಾಗಿ ಹೇಳಿದ ಮುದ್ದಣ್ಣ. ‘ಯಾಕಣ್ಣ, ಏನಾಯ್ತು?’ ಗಾಬರಿಯಿಂದ ಕೇಳಿದ ವಿಜಿ.

‘ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ’.

‘ಸ್ವಾಭಿಮಾನಕ್ಕೆ ತಾನೆ, ದೇಹಕ್ಕೇನೂ ಆಗಿಲ್ವಲ್ಲ’.

ADVERTISEMENT

‘ದೇಹಕ್ಕೆ ಏಟಾದರೆ ಸಹಿಸ್ಕೊಬಹುದು, ಸ್ವಾಭಿಮಾನಕ್ಕೆ ಪೆಟ್ಟಾದರೆ ಸಹಿಸಲಾರೆ’.

‘ಅಂದ್ರೆ, ನೀನು ತಾಯಿಯಂತೆ ಪ್ರೀತಿಸುವ ಪಾರ್ಟಿಯೇ ನಿನಗೆ ಬೇಡವಾಯ್ತಾ ಅಣ್ಣ’.

‘ನನ್ನ ಹೋರಾಟ ಫ್ಯಾಮಿಲಿ ಪಾಲಿಟಿಕ್ಸ್ ವಿರುದ್ಧ, ಪಾರ್ಟಿ ವಿರುದ್ಧವಲ್ಲ’.

‘ನೀನು ಹೃದಯದಲ್ಲಿ ಇಟ್ಕೊಂಡಿರೋ ನಿಮ್ ನಾಯಕನೂ ನಿಮಗೆ ಬೇಡವಾದರಾ ಅಣ್ಣ?’

‘ಇಲ್ಲ, ಅವರನ್ನು ಮತ್ತೆ
ವಿಶ್ವಗುರು ಆಗಿಸುವುದೇ ನನ್ನ ಗುರಿ’.

‘ಬಂಡಾಯ ಅಭ್ಯರ್ಥಿ ಅಂತೀಯ, ಪಾರ್ಟಿಗೂ ಬೈಯಲ್ಲ, ಮೇಲ್ಗಡೆಯವರಿಗೂ ಏನೂ ಅನ್ನಲ್ಲ ಅಂದ್ರೆ ಹೇಗಣ್ಣ, ನಿನ್ನ ಮಾತು ಡೌಟು ತರಿಸ್ತಿದೆ’.

‘ನಿನಗ್ಯಾಕೆ ಈ ಅನುಮಾನ ಬಂತು?’

‘ಹಿಂದೆ ಬಿ ಗ್ರೇಡ್ ಮಾಡಿದ್ದಾಗ್ಲೂ ಹಿಂಗೇ ಹೇಳಿ ಯೂಟರ್ನ್ ಮಾಡಿದ್ದೆ’.

‘ಏಯ್, ಅದು ಬಿ ಗ್ರೇಡ್ ಅಲ್ಲ, ಬ್ರಿಗೇಡ್. ಈ ಬಾರಿ ನನ್ನ ನಿಲುವು ದೃಢವಾಗಿದೆ’.

‘ಆದರೂ, ನಿನ್ನ ಹೃದಯದಲ್ಲಿರೋ ನಾಯಕ ಫೋನ್ ಮಾಡಿದರೆ ತಣ್ಣಗಾಗ್ತೀಯಣ್ಣ ನೀನು’ ಜೊತೆಯಲ್ಲಿದ್ದ ಅನೇಕರು ದನಿಗೂಡಿಸಿದರು.

‘ಮೇಲಿನವರು‌‌ ನನ್ನನ್ನ ಕೇರ್ ಮಾಡ್ತಿಲ್ಲ, ನನ್ನ ಬೆಂಬಲಿಗರು ನೋಡಿದರೆ ನನ್ನ ಮಾತೇ ನಂಬುತ್ತಿಲ್ಲವಲ್ಲ’ ಎಂದು ಮನದಲ್ಲೇ ಒದ್ದಾಡಿದ ಮುದ್ದಣ್ಣ, ‘ಆ ಬ್ರಹ್ಮನೇ ಬಂದು ಹೇಳಿದರೂ ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ’ ಎಂದ.

ಕೊನೆಗೂ, ದೆಹಲಿಯಿಂದ ಫೋನ್ ಬಂತು. ‘ಹೈ’ ನಾಯಕರ ಜೊತೆ ಮಾತನಾಡಿ ಹೊರಬಂದ ಮುದ್ದಣ್ಣ, ‘ಪಕ್ಷ ನನ್ನ ತಾಯಿ ಇದ್ದಂತೆ. ಅದರ ವಿರುದ್ಧ ನಿಂತರೆ ತಾಯಿಯನ್ನೇ ವಿರೋಧಿಸಿದಂತೆ...’ ಭಾಷಣ ಮುಂದುವರಿಯಿತು.

‘ಅಣ್ಣಾ, ಅದೇನೋ ಬ್ರಹ್ಮ ಬಂದು ಹೇಳಿದ್ರೂ... ಅಂದಿದ್ರಿ’.

‘ಹೌದು, ಹೇಳಿದ್ದೆ.‌ ಈಗಲೂ ಬ್ರಹ್ಮ ಬಂದು ಹೇಳಿಲ್ವಲ್ಲ, ನನ್ನ ಹೃದಯದಲ್ಲಿರುವ ನಾಯಕ...’ ಎನ್ನುತ್ತಿದ್ದಂತೆ ಬೆಂಬಲಿಗರೆಲ್ಲ ಚದುರಿಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.