ADVERTISEMENT

ಚುರುಮುರಿ: ಕನ್ನಡಕದ ಕರಾಮತ್ತು

ಸುಮಂಗಲಾ
Published 18 ಏಪ್ರಿಲ್ 2022, 1:13 IST
Last Updated 18 ಏಪ್ರಿಲ್ 2022, 1:13 IST
   

ಬೆಕ್ಕಣ್ಣ ಕಣ್ಣಿಗೊಂದು ಕನ್ನಡಕ ಸಿಕ್ಕಿಸಿಕೊಂಡು, ‘ಇಡೀ ಭರತಖಂಡದಲ್ಲಿ ನಮ್ಮ ಕರುನಾಡೇ ಈಗ ಎಲ್ಲಾದ್ರಾಗೆ ಮುಂದೈತಿ. ಕಾಂಗಿಗಳ ಕಾಲದಾಗೆ ಶೇ 10 ಇದ್ದಿದ್ದು ಕಮಲಕ್ಕನ ಕಾಲದಲ್ಲಿಶೇ 40ಕ್ಕೆ ಏರೈತಿ’ ಎಂದು ಬಲು ಖುಷಿಯಿಂದ ವದರುತ್ತಿತ್ತು.

‘ಮಂಗ್ಯಾನಂಥವ್ನೆ... ತೆಲಿ ಎಲ್ಲಿಟ್ಟಿದ್ದಿ?ಶೇ 40ಕ್ಕೆ ಏರಿದ್ದು ಕಮಿಷನ್. ಕಾಮಗಾರಿ ಗುತ್ತಿಗೆ ಮಾತ್ರವಲ್ಲ, ಗೋಶಾಲೆಗೆ ಮೇವು ಸರಬರಾಜು ಮಾಡೋವ್ರ ಹತ್ರಾನೂ ಕಮಿಷನ್ ಕೇಳ್ತಾರಂತೆ’ ಎಂದು ಬೈದೆ.

‘ಕಮಿಷನ್ ತಗಂಡ್ರೇನಾತು, ಸಬ್ ಕಾ ವಿಕಾಸ್ ಮಾಡ್ತಾರಲ್ಲ! ಶಾಸಕರು, ಸಚಿವರು ಕಂತ್ರಾಟುದಾರರಿಂದ ತಗಂಡ ಕಮಿಷನ್ ರಾಜ್ಯದ ಅಭಿವೃದ್ಧಿಗೇ ಬಳಸ್ತಾರ’ ವಿತಂಡವಾದ ಮುಂದುವರಿಸಿದ ಬೆಕ್ಕಣ್ಣ ತನ್ನ ಕನ್ನಡಕ ತೆಗೆದು ನನಗೆ ಕೊಟ್ಟಿತು.

ADVERTISEMENT

‘ಈ ಕೇಸರಿ ಫ್ರೇಮ್ ಕನ್ನಡಕದಾಗೆ ನೋಡಿದ್ರೆ ಕಮಲಕ್ಕನ ಮನಿಯವರು ಮಾಡೂದೆಲ್ಲ ಸರಿಯಾಗೈತಿ ಅಂತ ಕಾಣತೈತಿ. ನಮ್ಮ ಮೋದಿಮಾಮ ಹೇಳಿದ ಅಚ್ಛೇ ದಿನ್ ಇದ್ರಾಗೆ ಮಸ್ತ್ ಕಾಣತೈತಿ’ ಎಂದು ವಕ್ರನಗು ಬೀರಿತು.

‘ಅವೇನಲೇ?’ ಎಂದು ಪಕ್ಕದಲ್ಲಿದ್ದ ಇನ್ನೂ ನಾಕಾರು ಕನ್ನಡಕಗಳತ್ತ ಕೈತೋರಿದೆ.

‘ಎಲ್ಲಾ ಬ್ಯಾರೆಬ್ಯಾರೆ ಫ್ರೇಮ್ ಕನ್ನಡಕ. ಕಾಂಗಿಗಳ ಸೆಕ್ಯುಲರ್ ಫ್ರೇಮಿನ ಈ ಕನ್ನಡಕ ಹಾಕ್ಕಂಡರೆ ಅವರ ಕಾಲದ ಕಾರುಬಾರು ಎಲ್ಲಾ ಬರೋಬ್ಬರಿ ಐತಂತ ಕಾಣಿಸತೈತಿ, ಅವಾಗಿನ ಭ್ರಷ್ಟಾಚಾರ ಈ ಕನ್ನಡಕದಾಗೆ ಅಗೋಚರವಾಗತೈತಿ. ಇದು ಕುಮಾರಣ್ಣನ ಕನ್ನಡಕ. ಇದನ್ನು ಹಾಕ್ಯಂಡರೆ ಎರಡು ಸಲ ಮುಖ್ಯಮಂತ್ರಿಯಾದ್ರೂ ಎಲ್ಲಾರೂ ಬೆನ್ನಿಗೆ ಚೂರಿ ಹಾಕಿದ್ರು ಅಂತ ಕಣ್ಣೀರು ದಳದಳ ಇಳೀತೈತೆ. ಕುಂತಲ್ಲಿ ನಿಂತಲ್ಲಿ ಕಾಂಗಿಗಳದೇ ತಪ್ಪು, ಕಮಲಕ್ಕನೇ ಸ್ವಲ್ಪ ಓಕೆ ಅಂತ ಕಾಣತೈತಿ’ ಬೆಕ್ಕಣ್ಣ ಪ್ರತಿಯೊಂದು ಕನ್ನಡಕದ ಕರಾಮತ್ತನ್ನೂ ವಿವರಿಸಿತು.

‘ನಮಗೀಗ ಬೇಕಾಗಿರದು ಇವಲ್ಲಲೇ, ಗಾಂಧಿ ಫ್ರೇಮಿನ ಕನ್ನಡಕ, ಮತ್ತ ಅಂಬೇಡ್ಕರ್ ಕನ್ನಡಕ ಬೇಕು’ ಎಂದು ನಾನೆಂದರೆ ‘ಅವ್ ಬರೀ ಗ್ವಾಡೆ ಮೇಲಿರೋ ಫೋಟೋದಾಗಷ್ಟೇ. ಅಂಗಡಿವಳಗ ಈ ಕನ್ನಡಕಗಳೇ ಸಿಗವು’ ಎಂದು ಖೊಳ್ಳನೆ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.