
ಹರಟೆಕಟ್ಟೆಯಲ್ಲಿ ಎಲ್ಲರನ್ನೂ ಹೆದರಿಸುವ ಹಾಗೆ, ತಮಾಷೆಗೆ ‘ಬೌ ಬೌ’ ಎಂದ ಗುಡ್ಡೆ. ಪಟ್ ಅಂತ ಅವನಷ್ಟೇ ವೇಗವಾಗಿ ‘ಹಚಾ, ಹಚಾ’ ಎಂದಳು ಮಂಜಮ್ಮ. ಮಂಜಮ್ಮನ ತ್ವರಿತ ಪ್ರತಿಕ್ರಿಯೆಗೆ ಎಲ್ಲರಿಗೂ ಜೋರಾಗಿ ನಗು ಬಂತು.
‘ಲೇ ಗುಡ್ಡೆ, ಯಾಕಲೆ ಬೊಗಳಿದ್ದು?’ ಕೇಳಿದ ತೆಪರೇಸಿ.
‘ಇದು ಬೌ ಬೌ ನ್ಯೂಸ್... ಬೊಗಳಿದ್ದು ರೋಬೊ ನಾಯಿ’ ಎಂದ ಗುಡ್ಡೆ.
‘ರೋಬೊ ನಾಯಿನಾ? ಅಂದ್ರೆ?’ ಕೊಟ್ರನಿಗೆ ಕುತೂಹಲ.
‘ಮೊನ್ನೆ ಡೆಲ್ಲೀಲಿ ಕೃತಕ ಬುದ್ಧಿಮತ್ತೆ ಸಮ್ಮೇಳನದಲ್ಲಿ ನಮ್ಮ ವಿಜ್ಞಾನಿಗಳು ಒಂದು ರೋಬೊ ನಾಯಿ ಪ್ರದರ್ಶನ ಮಾಡಿ ಇದನ್ನು ನಾವೇ ಕಂಡು ಹಿಡಿದದ್ದು ಅಂತ ಕೊಚ್ಕಂಡ್ರಂತೆ. ಆಮೇಲೆ ಗೊತ್ತಾಗಿದ್ದೇನಂದ್ರೆ, ಅದು ಚೀನಾ ಮೇಡ್ ರೋಬೊ ನಾಯಿ!’
‘ಹೌದಾ? ಥೋತ್ತೇರಿ... ನಮ್ಮೋರಿಗೆ ಒಂದು ನಕಲಿ ನಾಯಿ ಸೃಷ್ಟಿ ಮಾಡೋಕೂ ಬರ್ಲಿಲ್ಲಂತಾ?’ ಮಂಜಮ್ಮಗೆ ಸಿಟ್ಟು ಬಂತು.
‘ಹೋಗ್ಲಿ, ಆ ನಾಯಿ ನಮ್ ತರ... ಐ ಮೀನ್ ನಮ್ ನಾಯಿಗಳ ತರ ಬೊಗಳುತ್ತಂತಾ? ಬಾಲ ಅಲ್ಲಾಡ್ಸುತ್ತಂತಾ?’ ತೆಪರೇಸಿ ಕೇಳಿದ.
‘ಅದಕ್ಕೆ ಬಾಲಾನೆ ಇಲ್ಲಂತೆ...’ ಎಂದ ಗುಡ್ಡೆ.
‘ಬಾಲ ಇಲ್ಲದ ಮೇಲೆ ಅದು ನಾಯೀನೆ ಅಲ್ಲ, ಅದಕ್ಕೆ ನಿಯತ್ತೂ ಇರಲ್ಲ ಬಿಡು...’
‘ಅಲ್ಲ, ಹಚಾ ಅಂದ್ರೆ ರೋಬೊ ನಾಯಿಗೆ ಅರ್ಥ ಆಗುತ್ತಂತಾ?’ ಕೊಟ್ರೇಶಿ ಕೊಕ್ಕೆ.
‘ಏನೋಪ್ಪ ಗೊತ್ತಿಲ್ಲ...’
‘ಅದು ರಾಜಕೀಯನೂ ಮಾಡುತ್ತಂತಾ?’
‘ನೋ ಐಡಿಯಾ... ಒರಿಜಿನಲ್ ನಾಯಿ ಆಗಿದ್ರೆ ಮಾಡ್ತಿತ್ತೇನಪ...’
‘ಲೇ ದುಬ್ಬೀರ, ನೀನ್ಯಾಕೋ ಏನೂ ಮಾತಾಡ್ತಿಲ್ಲ?’ ಮಂಜಮ್ಮ ಕೇಳಿದಳು.
‘ಯಾಕೋ ಅರ್ಧ ತೆಲಿನೋವು...’
‘ತೆಲಿ ಎಷ್ಟಿರತೈತಿ ಅಷ್ಟೇ ನೋವು ಬರ್ತತಿ... ಅದಿರ್ಲಿ, ಏನು ಯೋಚಿಸ್ತಿದ್ದೆ?’
‘ಏನಿಲ್ಲ, ಬಾಲ ಇಲ್ಲದ ಈ ನಾಯಿ ಹೈಕಮಾಂಡ್‌ನ ಅಲ್ಲಾಡಿಸಬೋದಾ ಅಂತ ಯೋಚಿಸ್ತಿದ್ದೆ...’
‘ಅಬಾಬಬ... ನಿಂಗೂ ಅರ್ಧ ತೆಲಿ ಐತಿ ಬಿಡಲೆ...’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.