ADVERTISEMENT

ಚುರುಮರಿ: ಉತ್ತರವಿಲ್ಲದ ಪ್ರಶ್ನೆಗಳು

ಲಿಂಗರಾಜು ಡಿ.ಎಸ್
Published 9 ಜನವರಿ 2023, 19:45 IST
Last Updated 9 ಜನವರಿ 2023, 19:45 IST
   

‘ಗಡಿ ಸಮಸ್ಯೆಗಳಿಗೆ ಶಾನುಭೋಗರು ಕಾರಣ ಅಲ್ಲುವಾ? ಪಟೇಲರು ಅಂದವ್ರೆ ಅದ್ಯಕ್ಸರು!’ ಚಂದ್ರು ಕ್ಯಾತೆ ತೆಗೆದ.

‘ಆ ಗಡಿಬಿಡಿ ಬ್ಯಾರೆ. ಇಲ್ಲಿ ನೋಡು, ರಾಜಕೀಯದವುಕ್ಕೆ ಏನು ಮಲ್ಲಾಗರು ಬಂದದೆ! ನರಿ, ನಾಯಿ, ತೋಳ, ಗುಲಾಮ, ಲಡ್ಡುಲಸೆ ಅಂತೆಲ್ಲಾ ಬೀದೀಲಿ ಬುಸುಗುಟ್ಕಂದು ಬೋದಾಡತಾವೆ? ಈ ಖೇಲು ಯಾವತ್ತು ಬಂದ್ ಆದದು?’ ನನ್ನ ಬೇಜಾರು ಹೊರಹಾಕಿದೆ.

‘ನೋಡ್ಲಾ, ಅಮಾಸೆ ಟೇಮಿಗೆ ಹುಚ್ಚು ಕೆದರ್ತದಂತೆ. ಹಂಗೇ ಇವುಕ್ಕೆ ಎಲೆಕ್ಷನ್ ಹತ್ತಿರಕ್ಕೆ ಬಂದಾಗ ನಾಲಗೆ ಕೂಗುಯ್ಯಾಲೆ ಹಾಡ್ತದೆ. ಎಲೆಕ್ಷನ್ ಗೆದ್ದಾತಿಂಗೇ ರಾಜೀಕಬೂಲಾಗಿ ಹೆಗಲ ಮ್ಯಾಲೆ ಕೈಯ್ಯಾಕ್ಯಂದು ಗೆಣೆಕಾರರ ಥರಾ ವಾಲಾಡ್ತವೆ’ ತುರೇಮಣೆ ವಿಶ್ಲೇಷಣೆ ಮಾಡಿದರು.

ADVERTISEMENT

‘ಅದೇ ಯಾಕೆ ಅಂತ?’ ನನ್ನ ಅನುಮಾನ ಹೋಗಿರಲಿಲ್ಲ.

‘ಒಂದಷ್ಟು ಪ್ರಶ್ನೆಗಳಿಗೆ ಉತ್ತರವೇ ಇರಕುಲ್ಲ ಕನೋ. ಉದಾಹರಣೆಗೆ, ಡ್ರಗ್ಸ್‌ ಕೇಸು ಎಲ್ಲಿಗೆ ಬಂತು? ಪಿಎಸ್‍ಐ ನೇಮಕಾತಿ ಹಗರಣ ಏನಾಯ್ತು? ಸೈಬರ್ ಕ್ರೈಮ್ ಎಲ್ಲಿಗೋಯ್ತು?’ ಅಂದ್ರು.

‘ಇನ್ನೂ ಅವಲ್ಲೋ! ವೋಟರ್ ಗೇಟ್ ಮುಚ್ಚಿಕ್ಯತ್ತಾ? ಬಿಟ್‍ಕಾಯಿನ್ ಬಿಟ್ಟೋಯ್ತಾ? ರಸ್ತೆಗುಂಡಿ ಮುಚ್ಚಿಕ್ಯಳದು ಯಾವಾಗ? ಪರ್ಸೆಂಟೇಜ್ ಯಾವಾಗ ಕೊನೆಯಾಯ್ತದೆ? ಒತ್ತುವರಿ ತೆರವು ಪೂರ್ತಿಯಾಗದು ಯಾವಾಗ?’ ಯಂಟಪ್ಪಣ್ಣ ನಿಟ್ಟುಸಿರುಬುಟ್ಟಿತು.

‘ಅಣೈ, ಶಾಸಕರು ವಿಧಾನಸಭೆಗೆ ತಪ್ಪದೇ ಬರದು ಯಾವಾಗ? ಪಕ್ಷಾಂತರ ಎಂದು ನಿಂತದು? ಕುಟುಂಬ ರಾಜಕಾರಣಕ್ಕೆ ಕೊನೆ ಯಾವಾಗ? ಅಧಿಕಾರಿಗಳ ಭ್ರಷ್ಟಾಚಾರ ಯಾವಾಗ ಕೊನೆಯಾದದು? ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಅಟ್ಟ ಹತ್ತಿ ಕುಂತಂಗೆ, ಇದು ಸುದ್ದಾಗೋದಿಲ್ಲ’ ಅಂತಂದೆ.

‘ಪಾರಿನ್ನಿಂದ ಕಳ್ಳದುಡ್ಡು ತಂದು ದೇಸದ ಜನಕ್ಕೆಲ್ಲಾ ಹಂಚತೀನಿ ಅಂದಿದ್ರಲ್ಲ! ಇದೂ ಹಂಗೀಯೆ?’ ಯಂಟಪ್ಪಣ್ಣ ನೆನಪಿಸಿಕೊಂಡಿತು.

‘ಕೇಳ್ರೋ ‘ನಾ ಖಾವೂಂಗ, ನಾ ಖಾನೇ ದೂಂಗ’ ಅನ್ನೋ ಸುಭಾಷಿತ ಯಾವತ್ತು ದಿಟವಾದದೋ ಆವತ್ತೇ ಇವೆಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ತದೆ!’ ತುರೇಮಣೆ ಕಡ್ಡೆರಡು ತುಂಡಾಗುವಂಗೆ ಮಾತಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.