ADVERTISEMENT

ಚುರುಮುರಿ | ಕೊರೊನಾ ಪಾಸ್‍ವರ್ಡು 

ಲಿಂಗರಾಜು ಡಿ.ಎಸ್
Published 25 ಮೇ 2020, 16:00 IST
Last Updated 25 ಮೇ 2020, 16:00 IST
   

ಮನ್ನೆ ರಾತ್ರಿ ತುರೇಮಣೆಯನ್ನ ಯಮದೂತಣ್ಣಗಳು ಹಿಡಕಬಂದು ಸ್ವರ್ಗದ ಬಾಗಿಲತಕ್ಕೆ ವಗಾಯಿಸಿ ಕಡೆದರು. ಕಿಂಡಿಯೊಳಗಿಂದ ಒಬ್ಬ ಗಂಧರ್ವ ಇಣುಕಿ ಪಾಸ್‍ವರ್ಡ್ ಕೇಳಿದ. ಯಮದೂತಣ್ಣಗಳು ಪಾಸ್‍ವರ್ಡು ಕೊರೊನಾ ಅಂತ ಹೇಳಿದ್ದರು. ಸಿಒಆರ್‌ಒಎನ್‍ಎ ಅಂದಾಗ ಬಾಗಿಲು ತಕ್ಕಂತು. ಒಳಗೆ ಕ್ವಾರಂಟೈನ್ ಸ್ಟಾರ್ ಹೋಟಲಿದ್ದಂಗೆ ಭಾಳಾ ಕ್ಲೀನಾಗಿತ್ತು. ಅಷ್ಟರಲ್ಲಿ ಗಂಧರ್ವನ ಮೊಬೈಲು ಬಡಕತ್ತು ‘ಮಂಡ್ಯದ ಗಂಡು ಮುತ್ತಿನ ಚಂಡು’ ಅಂತ.

‘ಲೇ ಮಂಡ್ಯಾದೋನೇನ್ಲಾ ನೀನು?’ ಅಂತ ಗಂಧರ್ವನ್ನ ಆಶ್ಚರ್ಯದಿಂದ ಕೇಳಿದರು ತುರೇಮಣೆ.

‘ಹ್ಞೂಂ ಕಣ್ರಿ ಸಾ, ನಾನು ನಾಗಮಂಗಲದೋನು. ಮುಂಬೈನಗಿದ್ದೆ, ಊರಿಗೆ ಕರೊನಾ ತಕ್ಕಬಂದು ಗೊಟಕ್ ಅಂದ್ಮೇಲೆ ಇಲ್ಲಿ ಅಪಾಯಿಂಟ್ಮೆಂಟ್ ಆಗ್ಯದೆ’ ಅಂದ ಅವ. ತಿರುಗಾ ಮೊಬೈಲು ರಿಂಗಾಯ್ತು. ಮಾತಾಡಿದ ಗಂಧರ್ವ ‘ನಮ್ಮ ಕಮೀಶನರ್ ಯಮರಾಜ್ ಯಮರ್ಜೆನ್ಸಿ ಮೀಟಿಂಗ್ ಕರೆದವ್ರೆ. ನನ್ನ ರಿಲೀವರ್ ಬ್ಯಾರೆ ರಜಾ ಹಾಕ್ಯವನೆ, ಏನು ಮಾಡದು?’ ಅಂತ ಟೆನ್ಷನ್ ಆದ. ಅವನಿಗೆ ಒಂದು ಐಡಿಯಾ ಬಂತು.

ADVERTISEMENT

‘ಅಣೈ, ನಮ್ಮೂರೋನು ದೇವರು ಬಂದಂಗೆ ಬಂದದೀಯಾ. ನನ್ನ ಬದಲಿ ಸ್ವಲ್ಪ ವೊತ್ತು ಗೇಟ್ ಕಾವಲು ಮಾಡು. ಹೊಸ ಕೇಸ್ ಬಂದ್ರೆ ಕೊರೊನಾ ಸ್ಪೆಲ್ಲಿಂಗ್ ಕೇಳಿ ಒಳಿಕ್ಕೆ ಬುಟ್ಟುಕೋ. ನಾನು ವೋಗಿ ಇಲ್ಲಿದ್ದೋನಂಗೇ ಬತ್ತೀನಿ’ ಅಂತ ಕಡದು ಹೊಂಟೋದ.

ಯಾರೋ ಗೇಟ್ ಬಾಗಿಲು ಬಡಿದರು. ನೋಡಿದ್ರೆ ಶ್ರೀಮತಿ ತುರೇಮಣೆ! ಇವುಳು ಇಲ್ಲೂ ಅಟಕಾಯಿಸಕೆ ಬಂದವುಳಲ್ಲಾ! ತಡಿ ಪಾಸ್‍ವರ್ಡ್ ಬದಲಾಯಿಸಮು ಅಂದು ‘ಇಂಗ್ಲೀಷ್ ರ‍್ಯಾಸ್ಕಲ್ ಸ್ಪೆಲ್ಲಿಂಗ್ ಯೇಳಮ್ಮಿ?’ ಅಂದ್ರು. ಶ್ರೀಮತಿಗೆ ಕನ್‌ಫ್ಯೂಸ್‌ ಆಯ್ತು. ಪಾಸ್‍ವರ್ಡು ಕೊರೊನಾ ಅಂದಿದ್ರಲ್ಲಾ! ಈಗ ಇಂಗ್ಲಿಷ್ ರ‍್ಯಾಸ್ಕಲ್ ಸ್ಪೆಲ್ಲಿಂಗ್ ತಿಳಕಣಕೆ ದುಮುದುಮುಸ್ವಾಮಿಗಳ ಕಡಿಂದ್ಲೆ ಬೈಸಿಗ್ಯಬಕಲ್ಲ ಅಂದು ಬೇಜಾರಲ್ಲಿ ‘ನಾ ಕಾಣೆ’ ಅಂದಳು.

ತುರೇಮಣೆ ನಿದ್ದೆಯಲ್ಲೇ ಖುಷಿಯಿಂದ ವಾಲಾಡತಿದ್ದುದ್ದ ನೋಡಿ ಶ್ರೀಮತಿ ಎಚ್ಚರಾಗಿ ‘ರಾವುಗತ್ತಲೇಲಿ ಉಡನ್ ಹಾರಕ್ಕೋಯ್ತಿದ್ದಯಾ. ಗೊಳ್ಳೆ ನರ ಕಿತ್ತೋದದು!’ ಅಂತ ರೆಡ್ ಅಲರ್ಟ್ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.