ADVERTISEMENT

ಚುರುಮುರಿ | ಚೆಲ್ಲಬೇಕು, ಬಾಚಬೇಕು!

ಬಿ.ಎನ್.ಮಲ್ಲೇಶ್
Published 17 ನವೆಂಬರ್ 2022, 19:32 IST
Last Updated 17 ನವೆಂಬರ್ 2022, 19:32 IST
   

‘ಈ ಸಲ ಎಮ್ಮೆಲ್ಲೆ ಎಲೆಕ್ಷನ್‌ಗೆ ನಿಂತು ನಾನೂ ಒಂದು ಕೈ ನೋಡಾಣ ಅಂತಿದೀನಪ...’ ದುಬ್ಬೀರ ಹರಟೆಕಟ್ಟೆಯಲ್ಲಿ ಹೇಳಿದಾಗ ಗುಡ್ಡೆ ಕಿಸಕ್ಕೆಂದ.

‘ಯಾಕಲೆ ನಗ್ತೀಯ? ನಂಗೆ ಎಮ್ಮೆಲ್ಲೆ ಆಗೋ ಯೋಗ್ತೆ ಇಲ್ವಾ?’ ದುಬ್ಬೀರ ರೇಗಿದ.

‘ಯೋಗ್ತೆ ಪ್ರಶ್ನೆ ಅಲ್ಲ, ರೊಕ್ಕ ಎಷ್ಟಿಟ್ಟಿದೀಯ? ಜುಜುಬಿ ಚಾ ಕುಡಿಸೋಕೂ ಚೌಕಾಸಿ ಮಾಡ್ತೀಯ...’

ADVERTISEMENT

‘ಇದಕ್ಕೆ ರೊಕ್ಕ ಯಾಕೆ ಬೇಕು? ಗೆಲ್ಲಿಸಿದ್ರೆ ನಿಮ್ಮನೆ ಸೇವಕನಾಗಿ ದುಡೀತೀನಿ ಅಂತ ಜನಕ್ಕೆ ಹೇಳ್ತೀನಿ’.

‘ಎಲ್ರೂ ಹಂಗೇ ಹೇಳೋದು. ಗೆದ್ದ ಮೇಲೆ ಜನರ ಮನಿ ಬಾಗಿಲಿಗೆ ಇವರೂ ಹೋಗಲ್ಲ, ಇವರ ಮನಿ ಬಾಗಿಲಿಗೆ ಜನರನ್ನೂ ಸೇರ್ಸಲ್ಲ’.

‘ನಮ್ ದುಬ್ಬೀರ ಹಂಗಲ್ಲಲೆ, ಹಗಲೂ ರಾತ್ರಿ ಜನರ ಮನಿ ಬಾಗಿಲಲ್ಲೇ ಬಿದ್ದಿರ್ತಾನೆ’ ತೆಪರೇಸಿಗೂ ನಗು.

‘ಲೇ ದುಬ್ಬೀರ, ಎಲೆಕ್ಷನ್ ಅಂದ್ರೆ ಏನ್ ತಿಳಿದಿದಿ? ಪುಟ್ಟೀಲಿ ರೊಕ್ಕ ಚೆಲ್ಲಬೇಕು, ಜೆಸಿಬೀಲಿ ರೊಕ್ಕ ಬಾಚಬೇಕು... ಜನರ ಸೇವೆ ಎಲ್ಲ ಭಾಷಣದ ಬದ್ನೇಕಾಯಿ...’ ಕೊಟ್ರೇಶಿ ಅನುಭವದ ಮಾತಾಡಿದ.

‘ಹೋಗ್ಲಿ ಜೆಸಿಬಿಯಲ್ಲಿ ಯಾವ ಪಾರ್ಟಿ ಟಿಕೆಟ್ ಕೇಳ್ತೀಯ?’ ಗುಡ್ಡೆ ಕೇಳಿದ.

‘ಜೆಸಿಬಿ ಅಂದ್ರೆ?’

‘ಜನತಾದಳ, ಕಾಂಗ್ರೆಸ್ಸು, ಬಿಜೆಪಿ ಕಣಲೆ’.

‘ಯಾವ ಪಕ್ಷನೂ ಬೇಡ, ಪಕ್ಷೇತರ ನಿಲ್ತೀನಿ’.

‘ಹಂಗಾದ್ರೆ ನೀನು ಗೆದ್ದಂಗೇ ಬಿಡು, ದೊಡ್ಡ ಪಕ್ಷಾನೂ ಇಲ್ಲ, ದುಡ್ಡೂ ಇಲ್ಲ ಅಂದ್ರೆ ಹೆಂಗೆ?’

‘ಎರಡೂ ಇಲ್ಲದೆ ಗೆದ್ದು ಜನರ ಸೇವೆ ಮಾಡ್ಬೇಕು ಅಂತ ನನ್ನಾಸೆ’.

ದುಬ್ಬೀರನ ಮಾತಿಗೆ ತಲೆ ಕೆರೆದುಕೊಂಡ ಗುಡ್ಡೆ, ‘ನೀನು ಎಮ್ಮೆಲ್ಲೆ ಆಗೋದು ಕಷ್ಟ. ಆದ್ರೆ ಜನರ ಸೇವೆ ಮಾಡಬಹುದು ನೋಡು’ ಎಂದ.

‘ಹೆಂಗೆ?’

‘ಸದ್ಯ ನಮ್ಮನಿ ಹತ್ರ ಚರಂಡಿ ಕಟ್ಕಂಡೈತೆ, ಬಂದು ಕ್ಲೀನ್ ಮಾಡಿ ಪುಣ್ಯ ಕಟ್ಕೋ ಸಾಕು’.
ಗುಡ್ಡೆ ಮಾತಿಗೆ ಹರಟೆಕಟ್ಟೆಯಲ್ಲಿ ನಗೆಯ ಅಲೆ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.