ADVERTISEMENT

ಚುರುಮುರಿ | ಮತಸಾಲ!

ಚಂದ್ರಕಾಂತ ವಡ್ಡು
Published 26 ಏಪ್ರಿಲ್ 2024, 19:12 IST
Last Updated 26 ಏಪ್ರಿಲ್ 2024, 19:12 IST
   

ನಿತ್ಯ ಊಟ ಆಯ್ತಾ, ತಿಂಡಿ ಆಯ್ತಾ, ಕಾಫಿ ಆಯ್ತಾ ಎಂದು ಮಾತು ಆರಂಭಿಸುತ್ತಿದ್ದ ಮಂಜು, ‘ಮತದಾನ ಆಯ್ತಾ?’ ಅಂತ ಹೊಸ ಕಾಳಜಿ ತೋರಿದ.

‘ನನ್ನ ಮತ ನನ್ನ ಹಕ್ಕು, ಅದನ್ನು ದಾನ ಏಕೆ ಮಾಡಲಿ?’ ತಿಂಗಳೇಶನ ಪ್ರತಿರೋಧ.

‘ಅರೇ… ಅದಕ್ಯಾಕೆ ದುರ್ದಾನ ಪಡೆದಂತೆ ಆಡ್ತೀಯ? ನೀನು ದಾನ ಆದ್ರೂ ಮಾಡು, ಸಾಲ ಆದ್ರೂ ಕೊಡು. ನನಗೇನು ಅನುದಾನ ಸಿಗುತ್ತಾ?’ ಥೇಟ್ ಶಾಸಕನ ಹತಾಶೆ ತೋರಿದ ಮಂಜು.

ADVERTISEMENT

‘ಹಾಗೇ ಅಂದುಕೊ. ನಾನು ‘ಮತದಾನ’ ಮಾಡಿಲ್ಲ, ‘ಮತಸಾಲ’ ಕೊಟ್ಟಿದ್ದೇನೆ. ಗೆದ್ದವರು ಐದು ವರ್ಷದಲ್ಲಿ ಬಡ್ಡಿ ಸಮೇತ ಹಿಂದಿರುಗಿಸಬೇಕು’.

‘ನೀನು ಕೊಟ್ಟಿದ್ದು ಸಾಲ ಅಲ್ಲ, ನಾನು ಮಾಡಿದ ಸೇವೆಗೆ ಕೂಲಿ ಅಂತಾರೆ. ಕೊಟ್ಟವ ಕೋಡಂಗಿ, ಇಸಗೊಂಡವ ಈರಭದ್ರ ಗಾದೆ ಕೇಳಿಲ್ಲವೇನು? ನೀನು ‘ನನ್ನ ಸಾಲ ನನ್ನ ಹಕ್ಕು’ ಅಂತ ಬ್ಯಾನರ್ ಹಿಡಿಯಬೇಕು ಇಲ್ಲವೇ ಕ್ಷಮಾದಾನ ಮಾಡಬೇಕು. ‘ದಾನ’ದಿಂದ ಬಿಡುಗಡೆ ಇಲ್ಲ!’

‘ಕೊನೆಗೆ ಮತದಾರರೇ ಸಾಲಮನ್ನಾ ಮಾಡಬೇಕಂತೀಯಾ…?’

‘ದಾನನೂ ಬೇಡ, ಸಾಲನೂ ಬೇಡ, ಹೇಗೂ ಸುದ್ದಿ ಮಾಧ್ಯಮಗಳು ರಣಕಹಳೆ ಊದಿವೆ. ಮತದಾರರು ಮತಾಸ್ತ್ರ ಉಪಯೋಗಿಸುವುದೇ ಸರಿಯಾದ ಮಾರ್ಗ’.

‘ಅದಕ್ಕೇನಂತೆ… ‘ಪಾಶುಮತಾಸ್ತ್ರ’ ಪ್ರಯೋಗಿಸಿ ಸದೆಬಡಿಯೋಣ! ನಿಮ್ಮೂರಿನಲ್ಲಿ ಪ್ರಜಾತಂತ್ರದ ಮಾರಿಹಬ್ಬ ಹೇಗಾಯ್ತು?’

‘ಯಾರೂ ಬಾಯಿ ಬಿಡುತ್ತಿಲ್ಲ. ಬಾಯಿ ಬಿಟ್ಟರೆ ವಾಸನೆ ಗೊತ್ತಾಗುತ್ತೆ ಅಂತ ಭಯ. ಎಲ್ಲರೂ ಸಣ್ಣ ಕಳ್ಳನನ್ನು ಹುಡುಕುತ್ತಿದ್ದರು. ಆದರೆ ಕೊಟ್ರೇಶಿ ಮಾತ್ರ ನನಗೆ ದೊಡ್ಡ ಕಳ್ಳನೇ ಬೇಕು ಅಂತ ಹಟ ತೊಟ್ಟಿದ್ದ. ಸಣ್ಣ ಕಳ್ಳನು ದೊಡ್ಡ ಕಳ್ಳ ಆಗುವ ಭರಾಟೆಯಲ್ಲಿ ಹೆಚ್ಚೆಚ್ಚು ದೋಚುತ್ತಾನೆ ಅಂಬೋದು ಅವನ ತರ್ಕ’.

‘ಬಲಿ ಯಾವುದೇ ಇರಲಿ, ಊರಹಬ್ಬದಲ್ಲಿ ಉಂಡೋನೇ ಜಾಣ ಬಿಡು’ ತಿಂಗಳೇಶ ಮಂಗಳ ಹಾಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.