ADVERTISEMENT

ಚುರುಮುರಿ| ಹೊಸ ಭವಿಷ್ಯ!

ಬಿ.ಎನ್.ಮಲ್ಲೇಶ್
Published 31 ಡಿಸೆಂಬರ್ 2021, 19:31 IST
Last Updated 31 ಡಿಸೆಂಬರ್ 2021, 19:31 IST
Churumuri 01012022
Churumuri 01012022   

‘ಟರ‍್ರ್‌ ಟಕಟಕ... ಲಕ್ಷ್ಮೀ ಇಚಾರ, ಧನಲಕ್ಷ್ಮೀ ಇಚಾರ... ಶುಭವಾಗುತೈತೆ, ಟರ‍್ರ್‌ ಟಕಟಕ...’ ಬುಡುಬುಡಿಕೆಯ ಸದ್ದು ಕೇಳಿ ಮುಖ್ಯಮಂತ್ರಿ ಮನೆಯಿಂದ ಹೊರಬಂದರು.

‘ಸ್ಸಾಮಿ, ಹೋದ ವರ್ಸ ನಿನ್ನ ಹಣೆಬರ- ಹಣೆಬರ ಅಂದ್ರೆ ಟೇಮು- ಟೇಮು ಅಂದ್ರೆ ಗ್ರಾಚಾರ ನೆಟ್ಟಗಿತ್ತು. ಇಟ್ಟ ಹೆಜ್ಜೆ ಪಟ್ಟವಾಯ್ತು, ಮುಟ್ಟಿದ್ದೆಲ್ಲ ಚಿನ್ನವಾಯ್ತು. ನೀ ಬೇಡಿದ್ದು ಬಯಸಿದ್ದು ಎದ್ದು ಬಿದ್ದು ಓಡಿ ಬಂತು, ನಿಜವೋ?’

‘ಇರಬಹುದು, ಆದ್ರೆ ನಾನು ಜ್ಯೋತಿಷ್ಯ ಕೇಳಲ್ಲ’.

ADVERTISEMENT

‘ಸ್ಸಾಮಿ... ಇದು ಹೊಸ ವರ್ಷ, ಹೊಸ ದಿಕ್ಕು. ನಿನ್ನ ಗ್ರಾಚಾರದಲ್ಲಿ ಸ್ವಲ್ಪ ಮಿಸ್ಟೀಕ್ ಕಾಣತೈತೆ. ಒಂದು ರಾಜ್ಯ ಕಟ್ಟಬೇಕು, ಒಂದು ದೇಶ ಕಟ್ಟಬೇಕು, ಜನರ ಕಲ್ಯಾಣ ಮಾಡಬೇಕು ಅಂತ ಆಸೆ ಇಟ್ಕಂಡಿದ್ದೆ. ಸ್ಸಾಮಿ ನೀನು ನಿಂತ ಜಾಗ, ಕುಂತ ಕುರ್ಚಿ ಮ್ಯಾಲೆ ನಿಮ್ಮವರದೇ ಕಣ್ಣು ಬಿದ್ದೈತೆ. ನಿಜ ಅಂದ್ರೆ ನಿಜಾನ್ನು, ಸುಳ್ಳಂದ್ರೆ ಸುಳ್ಳನ್ನು...’

‘ನಿಜ’ ಎಂದರು ಮುಖ್ಯಮಂತ್ರಿ.

‘ಸ್ಸಾಮಿ, ಯಾವುದೋ ನೋವು ನಿನ್ನ ಕಾಡ್ತಾ ಐತೆ. ನಿಂತ ಕಾಲ ಬಲ ಕುಸಿದೋಗ್ತಾ ಐತೆ. ಒಂದು ಗಟ್ಟಿಯಂತ್ರ ಮಾಡಿ ನಿನ್ನ ರಟ್ಟೆಗೆ ಕಟ್ಟಿಬಿಡ್ತೀನಿ. ಕಾಲ ಬಲ ನೆಟ್ಟಗಾಗಿ ಗ್ರಹಬಲ ನೀ ಹೇಳಿದಂಗೆ ಕೇಳದಿದ್ರೆ, ಥತ್... ನಿನ್ನ ಮುಖ ತೋರಿಸಬೇಡ ಅಂದುಬಿಡು ಆಯ್ತಾ?’

‘ಅದೆಲ್ಲ ಸರಿ, ನನ್ಮೇಲೆ ಯಾರ ಕಣ್ಣೂ ಬೀಳದಂಗೆ ಮಾಡೋಕೆ ಸಾಧ್ಯಾನಾ?’

‘ಸ್ಸಾಮಿ, ನಿಮಗೆ ಆಗದೋರು ನಡೆದಾಡೋ ಮಣ್ಣು, ಅವರ ತಲೆ ಮ್ಯಾಗಿನ ಕೂದಲು ತಂದುಕೊಟ್ಟುಬಿಡು, ಮಟಮಟ ಮಧ್ಯಾನ ಪಕಪಕಾಂತ ಯಾರೂ ನಿನ್ನ ತಂಟೆಗೆ ಬರದಂಗೆ ಮಾಡಿಕೊಡ್ತೀನಿ. ನಂಗೆ ನಿಂದೊ೦ದು ಹಳೆ ಶರ್ಟು ಕೊಡ್ತೀಯ?’

‘ಶರ್ಟ್ ಬೇಕಾದ್ರೆ ಕೊಡ್ತೀನಿ, ಆದ್ರೆ ಅವರ ಕೂದಲು, ಮಣ್ಣು ಎಲ್ಲಿಂದ ತಂದುಕೊಡ್ಲಿ, ಹೋಗಪ್ಪ ಮಾರಾಯ’ ಮುಖ್ಯಮಂತ್ರಿ ತಲೆ ಕೊಡವಿ ಒಳನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.