ADVERTISEMENT

ಚುರುಮುರಿ| ಕ್ವಾಟ್ಲೆ ಪರೀಕ್ಷೆ

ಲಿಂಗರಾಜು ಡಿ.ಎಸ್
Published 28 ನವೆಂಬರ್ 2022, 19:30 IST
Last Updated 28 ನವೆಂಬರ್ 2022, 19:30 IST
   

‘ಅಪರಾಧಿಗಳು ಸುಳ್ಳು ಹೇಳಿದ್ರೆ ಪತ್ತೆ ಮಾಡಕ್ಕೆ ನಾನಾ ಥರದ ಪರೀಕ್ಷೆ ಅವಂತೆ. ಇದರಿಂದ ಸಾಮಾನ್ಯ ಜನಕ್ಕೇನು ಉಪಯೋಗ ಸಾ?’ ಅಂತ ಕೇಳಿದೆ.

‘ಪಕ್ಷಗಳು ಟಿಕೆಟ್ ಕೊಡೊ ಮೊದಲು ಕೆಲವು ಕ್ವಾಟ್ಲೆ ಪರೀಕ್ಷೆಗಳನ್ನ ಮಾಡಿ ಅಮಾಕ ಪಕ್ಷದಿಂದ ಟಿಕೆಟ್ ಕೊಡದು ಉತ್ತಮ’ ಅಂದ್ರು ತುರೇಮಣೆ.

‘ಬೇಜಾನ್ ಕಾಸು ಇರಬಕು, ವಿರೋಧಿಗಳಿಗೆ ಎಡಕೆ ಬಲಕೆ ಬಯ್ಯೊಗ್ರಫಿ ಪದ ಸಂಪತ್ತು ಇರಬಕು, ಜನ ಮಾತಾಡಿಸಿದರೆ ಕಪಾಳಕ್ಕೊಡಿಬಕು, ಕಾಸು ಇಸುಗಂಡು ಪೋಸ್ಟಿಂಗ್ ಮಾಡಿಸುವಾಗ ಆಡಿಯೊ-ವಿಡಿಯೊ ಎಚ್ಚರ ಇರಬಕು. ಇಷ್ಟಿದ್ರೆ ಸಾಕಲ್ವಾ? ಇನ್ನೇನು ಪರೀಕ್ಷೆ ಮಾಡೀರಿ?’ ವಿಚಾರಿಸಿದೆ.

ADVERTISEMENT

‘ಪೋಲಿಗ್ರಫಿ ಪರೀಕ್ಷೆ ಅಂತ ಅದೆ. ಹನಿಟ್ರ್ಯಾಪ್ ಕುಜದೋಷ ಇದ್ರೆ ಅಪಾಪೋಲಿ ಅಂತ ಅಡಿಷನಲ್ ಲಿಸ್ಟಲ್ಲಿ ಮಡಗಬಕು’.

‘ಹೀನಸುಳಿ ಯಾವುದು ಅಂತ ಗೊತ್ತಾಯ್ತದೆ’.

‘ಗೆದ್ದ ಮೇಲೆ ಗೊಂತಲ್ಲಿ ಕಟ್ಟಿದ ದನ ಇದ್ದಂಗೆ ಇರತನಾ ಇಲ್ಲಾ ಪಕ್ಷದಿಂದ ಪಕ್ಷಕ್ಕೆ ಜಂಪ್ ಮಾಡಿ ತ್ಯಾಗಜೀವಿಯಾಗೋ ಆಸೆ ಐತಾ ಅಂತ ತಿಳಿಸೋ ಜಂಪರ್ ಪರೀಕ್ಷೆ ಮಾಡಬಕು’.

‘ಚೆನ್ನಾಗದೆ ಸಾ, ಆಮೇಲೆ?’

‘ಇನ್ನೊಂದದೆ, ಬ್ಯಾರೆ ಪಕ್ಷಕ್ಕೆ ಮಳ್ಳಿ ಥರಾ ನುಸುಳಿ ಸ್ಲೀಪರ್ ಸೆಲ್ ಆಗಿರೋ ಐನಾತಿ ಮಂಪರು ವಿದ್ಯೆ ಕಲಿತಿರಬೇಕು’

‘ಐನ್ ಟೈಮಲ್ಲಿ ಸಿಡೀಬೇಕು ಅಂತೀರ, ಆಮೇಲೆ?’

‘ಯಾವ್ಯಾವ ಬೂತಲ್ಲಿ ತನಗೆ ಎಷ್ಟೆಷ್ಟು ವೋಟು ಬಂದದು, ಎಷ್ಟು ಕಳ್ಳ ವೋಟು ಹಾಕಿಸ್ಕಬಕು ಅಂತ ಮಾಹಿತಿ ಕದಿಯೋ ಬೂತ್ ಮ್ಯಾಪಿಂಗ್ ಐಡಿಯಾ ಇರಬಕು’.

‘ಸಕತ್ತಾಗದೆ ಸಾ’.

‘ಸುಳ್ಳನ್ನ ಪದೇಪದೇ ಹೇಳಿ ನಿಜ ಮಾಡೋ ಟಕ್ಕರ್ ಬಾಂಬ್ ಆಗಿದ್ರೆ ಅವುನ್ನ ಸಿಎಂ ಮಾಡಿಕ್ಯಬೌದು!’

‘ನೀವು ಭಲಾರೆ ಕ್ಯಾತೆ ರಾಜತಂತ್ರಿ ಸಾ!’ ಅಂತ ಹೊಗಳಿದೆ.

‘ಹ್ಞೂಂ ಕಲಾ, ಎಲ್ಲಾ ಪಕ್ಷಗಳೂ ‘ನಮ್ಮ ಪಕ್ಷಕ್ಕೇ ಚುನಾವಣಾ ತಂತ್ರಗಾರ ಆಗುವೆ ಬಪ್ಪಾ’ ಅಂತ ಜುಲುಮೆ ಮಾಡ್ತಾವೆ!’ ಅಂದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.